ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಇದೇ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ ಮುಂದೂಡಿದೆ.
ಈ ಬಗ್ಗೆ ಅಧಿಕೃತವಾಗಿ ತಿಳಿಸಿರುವ ಜಂಟಿ ಕ್ರಿಯಾ ಸಮಿತಿ, 09.12.2024 ರಂದು ಜಂಟಿ ಕ್ರಿಯಾ ಸಮಿತಿಯು ಸಾರಿಗೆ ನಿಗಮಗಳ ಕಾರ್ಮಿಕರು ಡಿ.31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ನೋಟಿಸ್ ಅನ್ನು ಮುಖ್ಯಮಂತ್ರಿಯವರಿಗೆ ನೀಡಿತ್ತು. ಈ ಮಧ್ಯೆ ಆಡಳಿತ ವರ್ಗ ಕಾರ್ಮಿಕ ಇಲಾಖೆಯ ಮೂಲಕ ಡಿ.27ರಂದು ಕಾರ್ಮಿಕ ಆಯುಕ್ತರೊಂದಿಗೆ ರಾಜೀಸಂಧಾನ ಸಭೆಯನ್ನು ಏರ್ಪಡಿಸಿತ್ತು.
ಮಾಜಿ ಪ್ರಧಾನ ಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರು ನಿಧನರಾದ ಕಾರಣ ರಾಜ್ಯ ಸರ್ಕಾರವು ಅಂದು ಶೋಕಾಚರಣೆಯ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಿದ ಪರಿಣಾಮ ಸಂಧಾನ ಸಭೆ ಡಿ.30 ಕ್ಕೆ ಮುಂದೂಡಿಕೆಯಾಗಿದೆ.
ಈ ನಡುವೆ ಇಂದು (ಡಿ.29) ಸಂಜೆ ಮುಖ್ಯಮಂತ್ರಿಗಳ ಜತೆ ಸಾರಿಗೆ ಸಚಿವರು, ಸಾರಿಗೆ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು, ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ನಡೆಸಿದ ಸಭೆಯ ಫಲಶೃತಿಯಾಗಿ, ಸಾರಿಗೆ ಸಚಿವರು ಜಂಟಿ ಕ್ರಿಯಾ ಸಮಿತಿಗೆ ಉದ್ದೇಶಿತ ಸಾರಿಗೆ ಮುಷ್ಕರವನ್ನು ಹಿಂಪಡೆಯಬೇಕೆಂದು ಲಿಖಿತವಾಗಿ ಮನವಿ ಮಾಡಿದ್ದಾರೆ.
ಅಲ್ಲದೆ ಸಂಕ್ರಾಂತಿ ಹಬ್ಬದ ನಂತರ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯ ಮಂತ್ರಿಗಳ ಜತೆ ಸಭೆ ಏರ್ಪಡಿಸುವುದಾಗಿ ಕೋರಿರುವ ಹಿನ್ನೆಲೆಯಲ್ಲಿ ಡಿ.31ರಿಂದ ಕರೆ ನೀಡಲಾಗಿದ್ದ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿಯು ಒಮ್ಮತದಿಂದ ಮುಂದೂಡಿದೆ.
ಹೀಗಾಗಿ ಜಂಟಿ ಕ್ರಿಯಾ ಸಮಿತಿಯ ಮುಷ್ಕರದ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಾಲ್ಕೂ ನಿಗಮಗಳ ಸಾರಿಗೆ ಕಾರ್ಮಿಕರಿಗೂ, ಜಂಟಿ ಕ್ರಿಯಾ ಸಮಿತಿಯ ಸಹಭಾಗಿ ಸಂಘಟನೆಗಳ ಎಲ್ಲ ಕಾರ್ಯಕರ್ತರಿಗೂ ನಾವು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಸಂದರ್ಭದಲ್ಲಿ ಸಾಧಿಸಲಾದ ಕಾರ್ಮಿಕರ ಐಕ್ಯತೆಯನ್ನು ಮುಂದೆಯೂ ಕಾಪಾಡಿಕೊಳ್ಳಬೇಕೆಂದು ಎಲ್ಲ ನೌಕರರಲ್ಲಿ ಮನವಿ ಮಾಡುತ್ತೇವೆ.
ನಮ್ಮೊಡನೆ, ನಮ್ಮ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಒಪ್ಪಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೂ, ಸಾರಿಗೆ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳಿಗೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ಸಂಘಟನೆಗಳಿಗೂ ವಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಷ್ಕರವನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಎಲ್ಲ ನೌಕರರೂ ಡಿ.31ರಿಂದ ಕೆಲಸಕ್ಕೆ ಹಾಜರಾಗಬೇಕೆಂದು ಎಲ್ಲ ನೌಕರರಿಗೂ ವಿನಂತಿಸುತ್ತೇವೆ ಎಂದು ತಿಳಿಸಿದ್ದಾರೆ.