KSRTC: ಸಾರಿಗೆ ನೌಕರರಿಗೆ 7ನೇ ವೇತನ ಆಯೋಗ ಜಾರಿಗೊಳಿಸಲು ಡಿಸಿಎಂ ಡಿಕೆಶಿಗೆ ಕೂಟದ ಪದಾಧಿಕಾರಿಗಳ ಮನವಿ
ಬೆಂಗಳೂರು: ಸಾರಿಗೆ ನೌಕರರಿಗೆ 1.1.2024ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗಿರುವ ವೇತನ (7ನೇ ವೇತನ ಆಯೋಗ) ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮನವಿ ಸಲ್ಲಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶನಿವಾರ ಡಿ.7ರಂದು ಕನಕಪುರದಲ್ಲಿ ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು ಸಮಾನ ವೇತನ ಜತೆಗೆ 1.1.2020ರ ವೇತನ ಪರಿಷ್ಕರಣೆಯ 38ತಿಂಗಳ ಹಿಂಬಾಕಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಉಪ ಮುಖ್ಯಮಂತ್ರಿಗಳು ಶೀಘ್ರದಲ್ಲಿ ನಿಮ್ಮ ಬೇಡಿಕೆಗಳನ್ನು ಇಡೇರಿಸುತ್ತೇವೆ ಭಯಬಿಟ್ಟು ಕೆಲಸ ಮಾಡಿ ಎಂಬ ಭರವಸೆ ನೀಡಿದ್ದಾರೆ ಎಂದು ಕೂಟದ ಮುಖಂಡರು ತಿಳಿಸಿದ್ದಾರೆ.
ಮನವಿ ಪತ್ರದಲ್ಲೇನಿದೆ?: ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ತಿಳಿಯಪಡಿಸುವುದೇನೆಂದರೆ, ಚುನಾವಣಾ ಪೂರ್ವದಲ್ಲಿ ತಮ್ಮ ಸರ್ಕಾರ ಸಾರಿಗೆ ನೌಕರರಿಗೆ ನೀಡಿದ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಹಾಗೂ ಸೌಲತ್ತುಗಳನ್ನು ನೀಡುವ ಪ್ರಣಾಳಿಕೆ ಭರವಸೆಯನ್ನು ನಂಬಿ ಸಾರಿಗೆ ನೌಕರರು ಹಾಗೂ ಅವರ ಸಂಬಂಧಿಕರು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದರಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಲ್ಲದೆ ಇತ್ತೀಚಿಗೆ ನಡೆದ 3 ಉಪಚುನಾವಣೆಯಲ್ಲೂ ಸಹ ಹಗಲು ಇರುಳು ಎನ್ನದೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದರಲ್ಲಿ ಸಾರಿಗೆ ನೌಕರರು ಹಾಗೂ ಕುಟುಂಬದವರು ಬಹು ಮುಖ್ಯಪಾತ್ರ ವಹಿಸಿದ್ದಾರೆ ಹಾಗೂ ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದ ಮೇಲೆ ಸಾರಿಗೆ ನೌಕರರು ತಮ್ಮ ಶಕ್ತಿಮೀರಿ ದುಡಿದು ತಮ್ಮ ಸರ್ಕಾರ ನೀಡಿರುವ 5 ಯೋಜನೆಗಳಲ್ಲಿ ಬಹಳ ಪ್ರಮುಖ ಯೋಜನೆಯಾಗಿರುವ ಶಕ್ತಿ ಯೋಜನೆಯಲ್ಲಿ ಸರ್ಕಾರಕ್ಕೆ ಅತಿ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದಾರೆ.
ಶಕ್ತಿ ಯೋಜನೆಯಲ್ಲಿ ಸರ್ಕಾರಕ್ಕೆ ಅತಿ ಹೆಚ್ಚು ಜನಪ್ರಿಯತೆ ಬರಲು ಸಾರಿಗೆ ನೌಕರರ ಪಾತ್ರ ಬಹಳ ಪ್ರಮುಖವಾಗಿದೆ. ತಮ್ಮ ಸರ್ಕಾರವು ಈಗಾಗಲೇ ಸರ್ಕಾರಿ ನೌಕರರಿಗೆ ಹಾಗೂ ಇತರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರವೆಂದು ಸಾಬೀತು ಮಾಡಿದೆ.
ಅದೇ ರೀತಿ ಈ ಎಲ್ಲವನ್ನು ಪರಿಗಣಿಸಿ ಸಾರಿಗೆ ನೌಕರರಿಗೂ ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವಂತೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾರಿಗೆ ನೌಕರರ ಪಾಲಿನ ಆರಾಧ್ಯ ದೈವ ಆಗಬೇಕಾಗಿ ತಮ್ಮಲ್ಲಿ ವಿನಯ ಪೂರಕವಾಗಿ ಕೇಳಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.