ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿಬ್ಬಾಣ ದಿನವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.
ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಮಹಾ ಪರಿನಿಬ್ಬಾಣ ದಿನವಾದ ಇಂದು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅವರನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅಂಬೇಡ್ಕರ್ ಅವರು 1956 ಡಿಸೆಂಬರ್ 6ರಂದು ನಮ್ಮನ್ನೆಲ್ಲಾ ಅಗಲಿದರು. ಈ ದಿನವನ್ನೇ ಪರಿನಿಬ್ಬಾಣ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.
ಅವರು ತಮ್ಮ ಬದುಕನ್ನು ಸಾಮಾಜಿಕ ಹೋರಾಟದಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡರು. ಅಂಬೇಡ್ಕರ್ ಅವರು ಈ ದೇಶಕ್ಕೆ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದಂತಹ ಸಂವಿಧಾನವನ್ನು ಕೊಟ್ಟಿದ್ದಾರೆ. ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನವೆಂದು ನಮ್ಮ ಸಂವಿಧಾನ ಖ್ಯಾತಿ ಪಡೆದಿದೆ.
ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಠಾನವಾಗಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಈ ದೇಶದ ಜನರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು.
ದಲಿತರಿಗೆ ಮಾತ್ರವಲ್ಲದೇ ಸಮಸ್ತ ವರ್ಗದವರಿಗೂ ಸಾಮಾಜಿಕ ಅವಕಾಶಗಳನ್ನು ದೊರಕಿಸಲು ಅವರು ಶ್ರಮಿಸಿದರು. ಅವಕಾಶ ವಂಚಿತರು, ಶೋಷಣೆ, ಅನ್ಯಾಯಕ್ಕೆ, ಅವಮಾನಕ್ಕೆ, ದೌರ್ಜನ್ಯಕ್ಕೆ ಒಳಪಟ್ಟ ಎಲ್ಲಾ ಜನರ ಪರವಾಗಿ ಕೆಲಸ ಮಾಡಿದ್ದರು. ಸಮಾಜದಲ್ಲಿ ಸಮಾನತೆ ಬಯಸಿ ಅದನ್ನೇ ನಿರ್ಮಿಸಲು ಬಹಳ ಸ್ಪಷ್ಟವಾಗಿ ಹೇಳಿದ್ದರು.
ಸಂವಿಧಾನದ ಧ್ಯೇಯೋದ್ದೇಶಗಳೂ ಅದನ್ನೇ ಹೇಳುತ್ತದೆ. ಸಂವಿಧಾನದಿಂದ ಅನುಕೂಲ ಪಡೆದವರು ಅವರ ಸೋದರ ಜನಾಂಗಗಳಿಗೆ ಸಹಾಯ ಮಾಡಬೇಕು. ಎಲ್ಲರೂ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕೆಂದು ಬಯಸಿದ್ದರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದ ನಾನು ಹಿಂದೂ ಆಗಿ ಹುಟ್ಟಿದ್ದು, ಹಿಂದೂ ಆಗಿ ಸಾಯುವುದಿಲ್ಲ ಎಂದು ತಮ್ಮ ಕಡೇ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಸ್ವೀಕಾರ ಮಾಡಿದ ನಂತರ ಬಹಳ ದಿನಗಳ ಕಾಲ ಉಳಿಯಲಿಲ್ಲ. ಅವರು ಕೊಟ್ಟ ಸಂವಿಧಾನದ ಪ್ರಕಾರ ಮತ್ತು ಅವರ ಹೋರಾಟದ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದು ಸಿಎಂ ಸೇರಿದಂತೆ ಬಹುತೇಕ ಎಲ್ಲ ಸಾರಿಗೆ ಅಧಿಕಾರಿಗಳು ಹೇಳಿದರು.
KSRTC ತುಮಕೂರು ವಿಭಾಗದ ಪರಿಶಿಷ್ಟ ಜಾತಿ, ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾರ್ಯಕ್ರಮವನ್ನು ಡಿ.ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿತ್ತು.
ತುಮಕೂರು ಬಸ್ ನಿಲ್ದಾಣ ಅಧಿಕಾರಿ ಮಾಸಪ್ಪ ನವರು ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿಭಾಗದ ಅಧ್ಯಕ್ಷರು ನಾಗೇಶ್ ಜಿ.ಬಿ. ಪ್ರಧಾನ ಕಾರ್ಯದರ್ಶಿ ಶಿವಲಿಂಗಮೂರ್ತಿ, ಕಾರ್ಯಾಧ್ಯಕ್ಷ ರಂಗನಾಥ್ ಎಲ್., ರಾಮಾಂಜನೇಯ, ವಿ.ಡಿ. ನುಮಂತರಾಯಪ್ಪ, ಭೂತೇಶ್, ಉಪಾಧ್ಯಕ್ಷರಾದ ರವಿಕುಮಾರ್, ಎಸ್,ಸಿದ್ದು ಹವಾಲ್ದಾರ್, ಪರಸಪ್ಪ ಭಾಗವಹಿಸಿದ್ದರು.
KSRTC ಮಂಡ್ಯ: ಸಾರಿಗೆ ನೌಕರರಿಂದ ಮಂಡ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ ಹಾಗೂ ದಾವಣಗೆರೆ ವಿಭಾಗೀಯ ಕಚೇರಿಯಲ್ಲೂ ಆಚರಣೆ ಮಾಡಲಾಯಿತು.
ಕೆಂಪೇಗೌಡ ಬಸ್ ನಿಲ್ದಾಣ, ಬಿಎಂಟಿಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಬಹುತೇಕ ಎಲ್ಲ ಘಟಕಗಳಲ್ಲೂ ಹಾಗೂ ಕೇಂದ್ರ ಕಚೇರಿಗಳಲ್ಲು ಆಚರಣೆ ಮಾಡಲಾಯಿತು.
![](https://vijayapatha.in/wp-content/uploads/2024/02/QR-Code-VP-1-1-300x62.png)