ಬೆಂಗಳೂರು: ಇನ್ನು ಮುಂದೆ ಚಿಲ್ಲರೆ ಕೊಡುವುದು ನಿಮ್ಮ ಕರ್ತವ್ಯ ಎಂದು ಪ್ರಯಾಣಿಕರು ಬಸ್ ನಿರ್ವಾಹಕರ (Conductor) ಜತೆ ಜಗಳ ಮಾಡುವಂತಿಲ್ಲ. ಒಂದು ವೇಳೆ ಕ್ಯಾತೆ ತೆಗೆದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹೌದು! ಈ ಕುರಿತು ಸುಪ್ರೀಂ ಕೋರ್ಟ್ ಕಳೆದ 2023ರ ಜನವರಿ 23ರಂದು ಮಹತ್ವದ ಆದೇಶ ಹೊರಡಿಸಿದ್ದು, ಚಿಲ್ಲರೆಗಾಗಿ ನಿರ್ವಾಹಕರನ್ನು ಹೊಣೆ ಮಾಡಿ ಅವರ ಜತೆಗೆ ತಕರಾರು ಮಾಡಿದರೆ ನೀವು ಸಮಸ್ಯೆಗೆ ಸಿಲುಕಿಕೊಳ್ಳುವುದು ಖಚಿತ.
ಇನ್ನು ಸುಪ್ರೀಂ ಕೋರ್ಟ್‌ನ ನೂತನ ಆದೇಶ ನಿರ್ವಾಹಕರನ್ನು ಈ ಸಮಸ್ಯೆಯಿಂದ ಪಾರುಮಾಡಿದೆ. ಚಿಲ್ಲರೆ ಇಟ್ಟುಕೊಳ್ಳುವುದು ಪ್ರಯಾಣಿಕರ ಕರ್ತವ್ಯವಾಗಿದೆಯೇ ಹೊರತು ನಿರ್ವಾಹಕರ ಜವಾಬ್ದಾರಿಯಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಬಸ್‌ನಲ್ಲಿ ಯಾರೋ ಪ್ರಯಾಣಿಕರು ಚಿಲ್ಲರೆ ತರದೆ ನಿರ್ವಾಹಕರ ಮೇಲೆ ಕೋಪ ಮಾಡಿಕೊಂಡು ಅವರನ್ನು ನಿಂದಿಸುತ್ತಾರೆ. ಆದರೆ ಅದನ್ನು ಸಹಿಸಿಕೊಂಡು ನಿರ್ವಾಹಕರು ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ. ಆದರೂ ಅವರನ್ನು ಇನ್ನಷ್ಟು ಹೀಯಾಳಿಸುವ ಮೂಲಕ ಕರ್ತವ್ಯಕ್ಕೂ ಅಡ್ಡಿ ಪಡಿಸುವುದು ಸಾಮಾನ್ಯವಾಗಿದೆ.
ಇದರಿಂದ ನಿರ್ವಾಹಕರು ಪ್ರಯಾಣಿಕರೆ ನಮ್ಮ ದೇವರು ಎಂಬ ಭಾವನೆಯಿಂದ ತಮಗಾಗುತ್ತಿರುವ ಮಾನಸಿಕ ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಎದುರಾದರೆ ಅದಕ್ಕೆ ಪ್ರಯಾಣಿಕರು ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.
ನಿರ್ವಾಹಕರ ಜತೆಗೆ ಪ್ರಯಾಣಿಕರು ನಮ್ರತೆಯಿಂದ ನಡೆದೆದುಕೊಳ್ಳಬೇಕು. ಇಲ್ಲ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪರೋಕ್ಷವಾಗಿ ತನ್ನ ಆದೇಶದಲ್ಲಿ ಎಚ್ಚರಿಕೆ ನೀಡಿದೆ.
ಸಾರಿಗೆ ಸಂಸ್ಥೆಗಳ ಚಾಲಕ ಮತ್ತು ನಿರ್ವಾಹಕರನ್ನು ಭಾರತೀಯ ದಂಡ ಸಂಹಿತೆ ಕಲಂ 21ರಡಿ ಸಾರ್ವಜನಿಕ ಸೇವಕ ಎಂದು ಗುರುತಿಸಿದ್ದು, ಪ್ರಯಾಣದ ವೇಳೆ ಚಾಲಕ ಮತ್ತು ನಿರ್ವಾಹಕರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದರೆ ಐಪಿಸಿ ಸೆಕ್ಟನ್ 322ರಡಿ ಮೂರು ವರ್ಷ, ಕಲಂ 353ರಡಿ ಮೂರು ವರ್ಷ ಕಲಂ 186ರಡಿ 3 ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.
ಈ ವಿಷಯವನ್ನು ಸುಪ್ರೀಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದ್ದು, ಈ ಸಂಬಂಧ ಪೊಲೀಸ್ ಇಲಾಖೆಯೂ ತನ್ನ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ಹೊರಡಿಸಿದೆ.