ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ರಾಜ್ಯ ರಸ್ತೆ ಸಾರಿಗೆ ಬಸ್ (KSRTC) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕುಂದಹಳ್ಳಿ ಬಳಿ ನಡೆದಿದೆ.
ಎಲ್ಲ ಗಾಯಾಳುಗಳನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಐವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಆಲೇನಹಳ್ಳಿಯಿಂದ ಕೆ.ಆರ್.ಪೇಟೆ ಕಡೆಗೆ ಬರುತ್ತಿದ್ದ ಬಸ್ ತಾಲೂಕಿನ ಕುಂದಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಸ್‌ನಲ್ಲಿ ಹೆಚ್ಚಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳೇ ಇದ್ದು, ಹಲವರ ಕೈ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಸೂಕ್ತ ಚಿಕಿತ್ಸೆ ನೀಡಿ: ಕೇಂದ್ರ ಸಚಿವ ಎಚ್‌ಡಿಕೆ ಸೂಚನೆ: ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕುಂದನಹಳ್ಳಿ ಗೇಟ್ ಬಳಿ ಸಂಭವಿಸಿರುವ ಬಸ್ ಅಪಘಾತದಲ್ಲಿ ಶಾಲಾ ಮಕ್ಕಳು ಸೇರಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತ ಉಂಟಾಯಿತು.
ಈ ಬಗ್ಗೆ ತಕ್ಷಣವೇ ಸ್ಪಂದಿಸಿ ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಮಾತನಾಡಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ ಹಾಗೂ ಗಾಯಾಳುಗಳಿಗೆ ಅಗತ್ಯವಾದ ತುರ್ತುಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರ್ ಸ್ವಾಮಿ ತಿಳಿಸಿದ್ದಾರೆ.
ಇನ್ನು ತೀವ್ರವಾಗಿ ಗಾಯಗೊಂಡಿರುವವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದೇನೆ. ಗಾಯಾಳುಗಳೆಲ್ಲರೂ ಆದಷ್ಟು ಶೀಘ್ರವಾಗಿ ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳಲಿ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.