ಬೆಂಗಳೂರು: ಏರಿಕೆಯಾಗುತ್ತಿರುವ ಡೀಸೆಲ್ ದರಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಸಾರಿಗೆ ಸಂಸ್ಥೆ ಈ ಹೊತ್ತಿನಲ್ಲಿ ಮೈಸೂರು, ಮಡಿಕೇರಿ ಸೇರಿದಂತೆ ರಾಜ್ಯದ ಆರು ಪ್ರಮುಖ ನಗರಗಳ ನಡುವೆ ಕೆಎಸ್‌ಆರ್‌ಟಿಸಿಯ 50 ಐಷಾರಾಮಿ ಎಲೆಕ್ಟ್ರಿಕ್ ಬಸ್‌ಗಳನ್ನು (ಇ- ವಾಹನಗಳು) ಓಡಿಸಲು ಸಿದ್ಧತೆ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಇಂದು (ಡಿ.31) ಶಾಂತಿನಗರದ ಕೇಂದ್ರ ಕಚೇರಿ ಬಳಿ ನೂತನ ಎಲೆಕ್ಟ್ರಿಕ್ ಬಸ್ ಒಂದಕ್ಕೆ ಸಾಂಕೇತಿಕವಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ತಲಾ 43 ಆಸನಗಳಿರುವ 50 ಸಂಪೂರ್ಣ ಹವಾ ನಿಯಂತ್ರಿತ ಇ-ಬಸ್‌ಗಳು ರಸ್ತೆಗಿಳಿಯಲು ಸಿದ್ಧಗೊಂಡಿದ್ದು, ಬೆಂಗಳೂರು – ಮೈಸೂರು – ಮಡಿಕೇರಿ – ವಿರಾಜಪೇಟೆ – ಚಿಕ್ಕಮಗಳೂರು – ದಾವಣಗೆರೆ ಮತ್ತು ಶಿವಮೊಗ್ಗ ನಗರಗಳ ನಡುವೆ ಇಂಟರ್ ಸಿಟಿ ಮಾರ್ಗಗಳಲ್ಲಿ ಸಂಚಾರಕ್ಕೆ ಮುಕ್ತವಾಗಿವೆ ಎಂದು ತಿಳಿಸಿದರು.
ಹನ್ನೆರಡು ಮೀಟರ್ ಉದ್ದದ ಈ ಬಸ್‌ಗಳ ಎಲೆಕ್ಟ್ರಿಕ್ ಬ್ಯಾಟರಿಯನ್ನು ಒಮ್ಮೆ ಚಾರ್ಚ್ ಮಾಡಿದರೆ 250 ರಿಂದ 300 ಕಿ.ಮೀ.ವರೆಗೆ ಚಲಿಸುತ್ತವೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ (ಒಜಿಎಲ್) ಇದರ ನಿರ್ವಹಣೆಗಾಗಿ ಕೆಎಸ್‌ಆರ್‌ಟಿಸಿಯಿಂದ 12 ವರ್ಷಗಳ ಗುತ್ತಿಗೆ ಪಡೆದಿದೆ.
ರಾಜ್ಯ ಸಾರಿಗೆ ಸಂಸ್ಥೆಗೆ ಈಗ ಸುಮಾರು 88 ರೂ.ಗಳಿಗೆ ಡೀಸೆಲ್ ಲಭಿಸುತ್ತಿದೆ. ಹೈಟೆಕ್ ವೋಲ್ವೊ ಬಸ್‌ಗಳ ಕಾರ್ಯನಿರ್ವಹಣಾ ವೆಚ್ಚ ಪ್ರತಿ ಕಿ.ಮೀ.ಗೆ 52 ರೂ.ಗಳಾಗಿದೆ. ಇನ್ನು ಡಿಸೇಲ್ ದರ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಕೆಎಸ್‌ಆರ್‌ಟಿಸಿ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ.
ಹೀಗಾಗಿ ಪ್ರಸ್ತುತ ಸಂಸ್ಥೆಗೆ ವೆಚ್ಚ ಕಡಿವಾಣದ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ನೆರವಾಗುತ್ತವೆ. ದೀರ್ಘ ಅಂತರದ ಸಂಚಾರಕ್ಕೆ ವಿದ್ಯುತ್ ಬಸ್‌ಗಳನ್ನು ಓಡಿಸುವುದು ಲಾಭದಾಯಕ ಎಂದು ಶ್ರೀರಾಮುಲು ವಿವರಿಸಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ನಿರ್ದೇಶಕರಾದ (ಪರಿಸರ ಮತ್ತು ಜಾಗೃತಾ) ಡಾ.ನವೀನ್ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ನೌಕರರು ಇದ್ದರು.