NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಜೂ.1ರಂದು ಪುರುಷರಿಗೂ ಉಚಿತ ಟಿಕೆಟ್ ವಿತರಿಸಿ ಅಹಿಂಸಾ ಪ್ರತಿಭಟನೆ- ಸರ್ಕಾರಕ್ಕೆ ಯುನೈಟೆಡ್ ಸಂಘಟನೆ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜೂ.1ರಂದು ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ವಿತರಿಸಿ ಅಹಿಂಸಾ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಅಂಡ್ ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ಎಚ್ಚರಿಕೆ ನೀಡಿದೆ.

ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಕೆ.ಆ‌ರ್.ವಿಜಯಕುಮಾ‌ರ್ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಹಾಗೂ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಸರ್ಕಾರ ಗಟ್ಟಿ ನಿರ್ಧಾರವನ್ನು ಮೇ 31ರೊಳಗೆ ಪ್ರಕಟಿಸಬೇಕು, ಇಲ್ಲದಿದ್ದರೇ ಜೂ.1 ರಂದು ರಾಜ್ಯದ ಎಲ್ಲ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುವ ಮೂಲಕ ವಿನೂತನ ಅಹಿಂಸಾ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಈ ಹಿಂದೆ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಹಲವಾರು ಮನವಿಗಳನ್ನು ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗದೆ, ಸರ್ಕಾರ ಮತ್ತು ಸಂಸ್ಥೆಯ ಅಧಿಕಾರಿಗಳು, ಸಾರಿಗೆ ಮಂತ್ರಿಗಳು, ಅಧ್ಯಕ್ಷ, ಉಪಾಧ್ಯಕ್ಷರ ಸಭೆ ಕರೆದು ಚರ್ಚಿಸಿ ಒಂದು ತೀರ್ಮಾನವನ್ನು ಪ್ರಕಟಿಸುವುದಾಗಿ ಹೇಳಿ ಸಭೆ ಮುಂದೂಡಿದ್ದರು.

ಆ ಬಳಿಕ ಮತ್ತೆ ಸಭೆ ಕರೆದು ಶೀಘ್ರದಲ್ಲೇ ಮತ್ತೊಂದು ಸಭೆ ಕರೆದು ನಿಮ್ಮ ಬೇಡಿಕೆಗಳ ಈಡೇರಿಸುತ್ತೇವೆ ಎಂದು ಹೇಳಿದ್ದರು. ಆದರೆ, ಸಾರಿಗೆ ಸಂಸ್ಥೆಯ ಅಧಿಕಾರಿಗಳಲ್ಲೇ ಎರಡು ಗುಂಪುಗಳಿರುವುದರಿಂದ ಅವು ತಲಾ ಒಂದೊಂದು ಬಣಗಳಿಗೆ ಬೆನ್ನೆಲುಬಾಗಿದ್ದು, ಬೆಂಬಲಿಸುತ್ತಿರುವುದರಿಂದ ತೀರ್ಮಾನಕ್ಕೆ ಬರಲು ವಿಳಂಬವಾಗುತ್ತಿದೆ. ಅದರಿಂದಾಗಿಯೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನುಕುಮಾರ್ ಸುದೀರ್ಘ ರಜೆ ಮೇಲೆ ತೆರಳಿದ್ದಾರೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಸಂಘವು ಸಭೆ ಸೇರಿ ಮೇ 31ರ ಒಳಗಾಗಿ ಸರ್ಕಾರ ಸಮಸ್ಯೆಯ ಇತ್ಯರ್ಥಕ್ಕಾಗಿ ನಿರ್ಧಾರವನ್ನು ಪ್ರಕಟಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ನೌಕರರ, ಸಂಸ್ಥೆಯ ಹಾಗೂ ಸಾರ್ವಜನಿಕ ಪ್ರಯಾಣಿಕರ ಹಿತ ದೃಷ್ಟಿಯಿಂದ, ತೀರ್ಮಾನಕ್ಕೆ ಬರದೆ ಹೋದರೆ ಅನಿವಾರ್ಯವಾಗಿ ಜೂ.1 ರಂದು ಒಂದು ದಿನ ರಾಜ್ಯದ ಎಲ್ಲ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ಅನ್ನು ನೀಡುವ ಮೂಲಕ ವಿನೂತನ ಅಹಿಂಸಾ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Megha
the authorMegha

Leave a Reply

error: Content is protected !!