ಚಿಕ್ಕಬಳ್ಳಾಪುರ: ನಗರದಿಂದ ಶಿಡ್ಲಘಟ್ಟಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಪ್ರಯಾಣಿಕರು ಭಯಭೀತಿಯಿಂದ ಹೌಹಾರಿ ಬಸ್‌ನಿಂದ ಹಾವಿನಷ್ಟೇ ವೇಗವಾಗಿ ಇಳಿದ ಪ್ರಸಂಗ ನಗರದಲ್ಲಿ ನಡೆದಿದೆ.
ನಗರಷ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಜನರನ್ನು ಹತ್ತಿಸಿಕೊಂಡ ಬಸ್ ಶಿಡ್ಲಘಟ್ಟ ವೃತ್ತಕ್ಕೆ ಬಂದಿದೆ. ಈ ವೇಳೆ ಬಸ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರು ಹಾವು ಹಾವು ಎಂದು ಕಿರುಚಾಡಿದ್ದಾರೆ. ಕೂಡಲೆ ಚಾಲಕ ಬಸ್ ನಿಲುಗಡೆ ಮಾಡಿದ್ದಾರೆ.
ಇನ್ನು ಹಾವು ಎಲ್ಲಿ ನಮ್ಮನ್ನು ಕಚ್ಚಿಬಿಡುತ್ತದೋ ಎಂಬ ಭಯದಿಂದ ಪ್ರಯಾಣಿಕರು ಸರಸರನೆ ಬಸ್‌ನಿಂದ ಇಳಿದಿದ್ದಾರೆ. ಹೀಗಾಗಿ ಹಾವಿನಿಂದ ಯಾವುದೇ ತೊಂದರೆ ಆಗಿಲ್ಲ.
ಬಳಿಕ ಉಗರತಜ್ಞ ಪೃಥ್ವಿರಾಜ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಸ್ಥಳಕ್ಕೆ ಬಂದು ಬಸ್‌ನಲ್ಲಿ ಅಡಗಿ ಕುಳಿತಿದ್ದ ಹಾವಿಗಾಗಿ ಹುಡುಕಾಟ ನಡೆಸಿದ್ದಾರೆ. ಇಡೀ ಬಸ್ ಜಾಲಾಡಿದರೂ ಹಾವು ಪತ್ತೆಯಾಗುತ್ತಿಲ್ಲ. ಎಲ್ಲಿ ಹೋಗಿದೆ ಎಂದು ತಲೆಕೆಡಿಸಿಕೊಂಡರು. ಆದರೆ, ಶೋಧ ಮಾಡುತ್ತಲೇ ಇದ್ದರು. ಬಹಳ ಹೊತ್ತಿನ ಬಳಿಕ ಹಾವು ಇಂಜಿನ್ ಮುಂಭಾಗದಲ್ಲಿ ಸೇರಿಕೊಂಡಿರುವುದು ಕಾಣಿಸಿದೆ.
ಪೃಥ್ವಿರಾಜ್ ಹಾವು ಹಿಡಿದು ಬಸ್‌ನಿಂದ ಹೊರಗೆ ತಂದಿದ್ದಾರೆ. ಆ ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಬಸ್‌ನಲ್ಲಿ ಹಾವು ಸೇರಿಕೊಂಡಿದೆ ಎಂಬ ವಿಷಯ ತಿಳಿದ ಮತ್ತು ಹಾವು ಹಿಡಿಯುವುದನ್ನು ನೋಡಲು ದಾರಿಯಲ್ಲಿ ತೆರಳುತ್ತಿದ್ದ ನೂರಾರು ಜನರು ಬಸ್ ಸುತ್ತಲು ಮುತ್ತಿದ್ದರು.
ಉಗರತಜ್ಞ ಪೃಥ್ವಿರಾಜ್ ಬಸ್‌ನಲ್ಲಿ ಇದ್ದ ಹಾವನ್ನು ಹಿಡಿದ ಬಳಿಕ ಮಾತನಾಡಿ, ಅದನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡುವುದಾಗಿ ತಿಳಿಸಿದ್ದಾರೆ.