ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ತಾರತಮ್ಯ ಜತೆಗೆ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಇತ್ಯರ್ಥಪಡಿಸುವ ಬಗ್ಗೆ ಸರ್ಕಾರದೊಂದಿಗೆ ಮಾತನಾಡುತ್ತೇವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಭರವಸೆ ನೀಡಿದ್ದಾರೆ.
ಗುರುವಾರ ಮಧ್ಯಾಹ್ನ ಸಮಸ್ಯೆಗಳ ನಿವಾರಣೆ ಹಾಗೂ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳು ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ಅವರ ನೃತೃತ್ವದಲ್ಲಿ ಎಂಡಿ ಕಚೇರಿಗೆ ಆಗಮಿಸಿ ಸಲ್ಲಿಸಿದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದರು.
ನೌಕರರ ಸಮಸ್ಯೆಗಳನ್ನು ಗಮನಿಸುತ್ತಿದ್ದು, ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಇರುವ ಕೆಲ ನಿಯಮಗಳನ್ನು ಬದಲಾವಣೆ ಮಾಡಿದ ಬಳಿಕ ಎಲ್ಲವನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸರ್ಕಾರದ ಮಟ್ಟದಲ್ಲಿ ಚೆರ್ಚಿಸಬೇಕಿದ್ದು ಆ ಬಳಿಕ ಎಲ್ಲವನ್ನು ಪರಿಶೀಲಿಸಿ ನೊಂದ ನೌಕರರಿಗೆ ನ್ಯಾಯಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, ತಮ್ಮಲ್ಲಿ ಮನವಿ – ಮಾಡಿಕೊಳ್ಳುವುದೇನೆಂದರೆ, ನಾಲ್ಕು ನಿಗಮಗಳನ್ನು ಒಳಗೊಂಡಂತೆ, ಕೆಲವೆ ಕೆಲವು ವಜಾಗೊಂಡ ನೌಕರರ ಪ್ರಕರಣಗಳು ಮಾತ್ರ ಬಾಕಿ ಇದ್ದು, ನೌಕರರು ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಈ ಬಾಕಿ ಉಳಿದ ಪ್ರಕರಣಗಳನ್ನು ಇತ್ಯರ್ಥಪಡಿಸಿ ನೌಕರರಿಗೆ ಕರ್ತವ್ಯ ನೀಡಬೇಕು ಎಂದು ಮನವಿ ಮಾಡಿದರು.
ಬಿಎಂಟಿಸಿಯಲ್ಲಿ ವಜಾಗೊಂಡ ನೌಕರರ ಮೇಲೆ ಷರತ್ತುಗಳನ್ನು ವಿಧಿಸಿ ಮರು ನೇಮಕ ಮಾಡಿಕೊಂಡಿದ್ದು, ನೌಕರರ ಮೇಲೆ ವಿಧಿಸಿದ್ದ ಷರತ್ತುಗಳನ್ನು ರದ್ದುಪಡಿಸಿ, 6- 4/2021ರ ಯಥಾಸ್ಥಿತಿಯನ್ನು ಕಾಪಾಡಿ ಬಾಕಿ ಉಳಿದ ನೌಕರರ ಪ್ರಕರಣವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಹಿಂಬಾಕಿ ಸಹಿತ ಮರುನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದರು.
ನೌಕರರ ಸಂಘದ ಬೇಡಿಕೆಗಳು: 1) ಮುಷ್ಕರ ಸಮಯದಲ್ಲಿ ವಜಾಗೊಂಡ ನೌಕರರನ್ನು ಯಾವುದೇ ಪರತ್ತು ವಿಧಿಸದೆ. ದಿನಾಂಕ: 06/04/2021ರ ಯಥಾಸ್ಥಿತಿಯನ್ನು ಕಾಪಾಡಿ ಹಿಂಬಾಕಿ ಸಹಿತ ಮರು ನೇಮಕ ಮಾಡುವುದು.
2) ಮುಷ್ಕರದ ಸಮಯದಲ್ಲಿ ನೌಕರರು ಮತ್ತು ನೌಕರರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲ ಸುಳ್ಳು ಪೊಲೀಸ್ ಪ್ರಕರಣಗಳನ್ನು ಕೈಬಿಡಬೇಕು. 3) ಸರ್ಕಾರಿ ನೌಕರರಿಗೆ ನೀಡುವ ವೇತನ ಮಾದರಿಯಂತೆ ಸಾರಿಗೆ ನೌಕರರಿಗೆ ಸರಿಸಮಾನ ವೇತನವನ್ನು ಜಾರಿಗೊಳಿಸುವುದು.
4) ಸರ್ಕಾರಿ ನೌಕರರಿಗೆ ನೀಡುವ ಹಾಗೆ ಸಾರಿಗೆ ನೌಕರರಿಗೂ ಸಹ ನಗದು ರಹಿತ ಆರೋಗ್ಯ ಭಾಗ್ಯ ಅಥವಾ ಆರೋಗ್ಯ ಸಂಜೀವಿನಿಯನ್ನು ಅಳವಡಿಸಿಕೊಡುವುದು. 5) ನಾಲ್ಕು ನಿಗಮಗಳಲ್ಲಿ ಟ್ರೈನಿಂಗ್ ಪದ್ಧತಿಯನ್ನು ಸಂಪೂರ್ಣ ರದ್ದುಪಡಿಸಿ ಪೂರ್ಣ ಪ್ರಮಾಣದ ವೇತನವನ್ನು ನೀಡುವುದು.
6) ಸರ್ಕಾರದ ಆದೇಶದನ್ವಯ 10/04/2002ರಂದು ಮತ್ತು ಅನಂತರ ಹೊಸದಾಗಿ ನೇಮಕಗೊಂಡ ಮತ್ತು ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉಪದಾನವನ್ನು ಉಪದಾನ ಪಾವತಿ ಕಾಯ್ದೆ 1972ರ ಅನ್ವಯ ಪಾವತಿ ಮಾಡತಕ್ಕದ್ದು (ಸುತ್ತೋಲೆ ಸಂಖ್ಯೆ 1274ನ್ನು ರದ್ದುಗೊಳಿಸುವುದು).
7) ನಾಲ್ಕೂ ನಿಗಮಗಳಲ್ಲೂ ಏಕರೂಪದ ಕಾನೂನನ್ನು ಜಾರಿ ಮಾಡಿ (ಸಿ & ಆರ್ ನಿಯಮ ತಿದ್ದುಪಡಿ ಮಾಡುವುದು) ನಿರ್ದಿಷ್ಟ ಸಮಯದಲ್ಲಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸುವುದು.
8) ಎಲೆಕ್ಟ್ರಿಕ್ ಬಸ್‌ಗೆ ನಮ್ಮ ಸಂಸ್ಥೆಯ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿದಿಗಳನ್ನು ಸಂಸ್ಥೆಯಿಂದಲೇ ನೇಮಕ ಮಾಡಿಕೊಳ್ಳುವ ಮೂಲಕ ಖಾಸಗೀಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.
9) ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ನೌಕರರ ಮೇಲೆ ಮಾನಸಿಕ ಒತ್ತಡ ಹಾಗೂ ಅಧಿಕಾರಿಗಳ ಕಿರುಕುಳದಿಂದ ಅನೇಕ ನೌಕರರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣಗಳು ಮರುಕಳಿಸಿದಂತೆ, ಸೂಕ್ತ ಕ್ರಮಕ್ಕಾಗಿ ಸಮಿತಿಯನ್ನು ರಚಿಸಿ ಹಾಗೂ ಆ ಸಮಿತಿಯಲ್ಲಿ ಕಾರ್ಮಿಕರು, ಕಾರ್ಮಿಕ ಮಖಂಡರು ಹಾಗೂ ಅಧಿಕಾರಿಗಳನ್ನೊಳಗೊಳ್ಳುವಂತೆ ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಸುಧಾಕರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಮು, ಕಜಾಂಚಿ ಯೋಗೇಶ್, ಕಾರ್ಯಾಧ್ಯಕ್ಷ ಹರೀಶ್, ಪ್ರಚಾರ ಸಮಿತಿ ಅಧ್ಯಕ್ಷ ನಾಗೇಂದ್ರ, ರಾಮನಗರ ವಿಭಾಗದ ಜಂಟಿ ಕಾರ್ಯ ಕಾರ್ಯದರ್ಶಿ ಅಪ್ಪಾಜಿ, ಪದಾಧಿಕಾರಿಗಳಾದ ಯೋಗೇಶ್, ಪಾದಯಾತ್ರೆ ಪ್ರದೀಪ್, ಶ್ರೀಧರ್ ತಹಶೀಲ್ದಾರ್, ಸಂತೋಷ್, ಲಿಂಗಯ್ಯ, ಲೋಕೇಶ್, ಗುತ್ತಲೇಗೌಡ, ಮುಲ್ತಾನಿ ಮತ್ತಿತರರು ಇದ್ದರು.