ಬೆಂಗಳೂರು: ಪಂಜಾಬ್‌ನಲ್ಲಿ ಆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರಿಗೆ ಸ್ಪೈನಲ್ ಕಾರ್ಡ್ ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರು ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗಾಗಿ ತೀವ್ರನಿಗ ಘಟಕದಿಂದ ಇಂದು ವಾರ್ಡಿಗೆ ಸ್ಥಳಾಂತರಿಸಲಾಗಿದು, ಶಸ್ತ್ರ ಚಿಕಿತ್ಸೆ ಆಗಿರುವ ಕಾರಣ ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ರಾಜ್ಯದ ರೈತಾಪಿ ಬಂಧುಗಳು, ಅಭಿಮಾನಿಗಳು, ಹಿತೈಷಿಗಳು, ಸಂಘಟನೆಯ ಸದಸ್ಯರು, ಮುಖಂಡರು, ಸ್ನೇಹಿತರು ಆಸ್ಪತ್ರೆಗೆ ಬಂದು ನೋಡಬೇಕೆಂದು ದೂರವಾಣಿ ಕರೆ ಮಾಡುತ್ತಿದ್ದಾರೆ. ಆದರೆ, ಆರೋಗ್ಯ ವಿಚಾರಿಸಲು ಬರುವ ತಮ್ಮ ಭೇಟಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ತಾವೆಲ್ಲರೂ ದಯವಿಟ್ಟು ಅನ್ಯತಾ ಭಾವಿಸದೆ ಸಹಕರಿಸಬೇಕೆಂದು ಶಾಂತಕುಮಾರ್ ಕುಟುಂಬ ವರ್ಗದವರು ಕೋರಿದ್ದಾರೆ.
ಕೇಂದ್ರ ಸರ್ಕಾರ ಕರ್ನೂರ್‌ನಲ್ಲಿ ಆಯೋಜಿಸಿದ್ದ ರೈತ ಮುಖಂಡರ ಸಭೆಗೆ ದೆಹಲಿಯಿಂದ ತೆರಳುತ್ತಿದ್ದಾಗ ಕುರುಬೂರು ಶಾಂತಕುಮಾರ್ ಅವರಿದ್ದ ಕಾರು ಪಂಜಾಬಿನ ಪಾಟಿಯಾಲದ ಬಳಿ ಅಪಘಾತಕ್ಕೀಡಾಗಿತ್ತು. ಈ ವೇಳೆ ಪಾಟಿಯಾಲದ ರಾಜೇಂದ್ರ ಆಸ್ಪತ್ರೆಗೆ ಸೇರಿಸಲಾಗಿತ್ತು.
ಕುರುಬೂರು ಶಾಂತಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ಸರ್ಕಾರ ವಿಶೇಷ ಗಮನಹರಿಸಿ, ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಮೂಲಕ ಕರೆದು ತಂದು ಸೇರಿಸಿ ಚಿಕಿತ್ಸೆ ಕೊಡಿಸುತ್ತಿದೆ.