ಮೈಸೂರು: ಕನ್ನಡ ಮಂತ್ರ ಕಣಾ, ಶಕ್ತಿ ಕಣಾ…. ಎನ್ನುತ್ತಲೇ ಕನ್ನಡ ಡಿಂಡಿಮ ಬಾರಿಸುತ್ತಾ ತಮ್ಮ ಲೇಖನಿ ಮಾತ್ರದಿಂದಲೇ ಕನ್ನಡವನ್ನು ವಿಶ್ವದೆತ್ತರಕ್ಕೂ ಕೊಂಡೋಯ್ದ ಸಾಹಿತ್ಯ ಲೋಕದ ಮೇರು ಶಿಖರವಾದ ‘ಕುವೆಂಪು’ ಎಂಬ ಮೂರಕ್ಷರ ಕನ್ನಡದ ಗಾಯತ್ರಿ ಮಂತ್ರವೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ವಿದ್ಯಾರಣ್ಯಪುರಂನ ವಾಣಿ ವಿದ್ಯಾ ಮಂದಿರ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ವಾಣಿ ವಿದ್ಯಾ ಮಂದಿರದ ಪ್ರೌಢ ಶಾಲಾ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡಿಗೆ, ಕನ್ನಡ ಭಾಷೆಗೆ ಮೊಟ್ಟ ಮೊದಲ ಬಾರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಜ್ಞಾನಪೀಠ ಪುರಸ್ಕಾರಗಳಂತಹ ಅತ್ಯುನ್ನತ ಗೌರವಗಳನ್ನು ತಂದುಕೊಟ್ಟು ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ಕನ್ನಡ ಭಾಷೆಗೆ ಗಾಯತ್ರಿ ಮಂತ್ರದೋಪಾದಿಯಲ್ಲಿ ಶಕ್ತಿ ತುಂಬಿದವರು ಕುವೆಂಪು ಅವರೆಂದರು.
ನಮ್ಮ ಕನ್ನಡದ ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ಎಂಬುದನ್ನು ಕುವೆಂಪು ಅವರು ತಮ್ಮ ಬದುಕು ಮತ್ತು ಬರಹ, ಸಾಧನೆ ಮತ್ತು ಸಿದ್ಧಿಯ ಧ್ಯೇಯ ವಾಕ್ಯ ಮಾಡಿಕೊಂಡು ಕನ್ನಡವನ್ನು ಕಟ್ಟಿದವರು. ಅಷ್ಟು ಮಾತ್ರವಲ್ಲ, ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ ವಿನಾಶಗೊಳಿಸಬೇಕು.
ಮತ ಮನುಜ ಮತವಾಗಬೇಕು ಪಥ ವಿಶ್ವಪಥವಾಗಬೇಕು ಎಂದು ಜಗತ್ತಿಗೆ ವಿಶ್ವಮಾನವ ಸಂದೇಶ ನೀಡಿದ ಪ್ರಪಂಚದ ಪ್ರಪ್ರಥಮ ಮಹಾಕವಿ ಕುವೆಂಪು ಎಂದ ಅವರು,ಇಂತಹ ಜಗದ ಕವಿಯ, ಯುಗದ ಕವಿಯ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ನಾಡು ಆಚರಿಸುತ್ತಿರುವುದು ಇಡೀ ಜಗತ್ತೇ ಮೆಚ್ಚುವಂಥದ್ದೆಂದು ಹೇಳಿದರು.
ಖ್ಯಾತ ಮುಕ್ತಕ ಕವಿ, ಸಾಹಿತಿ ಎಂ.ಮುತ್ತುಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕುವೆಂಪು ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸಿ “ಕುಪ್ಪಳ್ಳಿ ಯಲ್ಲಿ ಹುಟ್ಟಿ ರಾಮ ಕಥೆಯನು ಬರೆದು ತಪ್ಪುಗಳ ತಿದ್ದುತ್ತಾ, ಅಕ್ಕರೆಯ ಸಿಂಚಿಸುತ ತುಪ್ಪವನು ಹಂಚಿದರೆಂಬ” ಮುಕ್ತಕವೊಂದನ್ನು ವಾಚಿಸಿ ಕುವೆಂಪು ಅವರನ್ನು ಗುಣಗಾನ ಮಾಡಿದರು.
ಪ್ರತಿಷ್ಠಾನದ ಅಧ್ಯಕ್ಷರೂ ಆದ ಖ್ಯಾತ ಶಿಕ್ಷಣ ತಜ್ಞ ಎ. ಸಂಗಪ್ಪ ಅವರು,ಕುವೆಂಪು ಸ್ಮರಣೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.ವಾಣಿ ವಿದ್ಯಾ ಮಂದಿರದ ಆಡಳಿತಾಧಿಕಾರಿ ಎಚ್. ಕೆ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಸುಜಯಾ,ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪರಶುರಾಮೇಗೌಡ, ಹಿರಿಯ ಶಿಕ್ಷಕ ಶ್ರೀನಿವಾಸರಾವ್, ಶಿಕ್ಷಕಿಯರಾದ ಎಲ್. ಕವಿತಾ, ಶೈಲಜಾ, ಭವಾನಿ, ಜ್ಯೋತಿ ಹಾಗೂ ಚಿತ್ರಕಲಾ ಶಿಕ್ಷಕ ಎಂ.ಆರ್.ಮನೋಹರ್, ಚಿಂತಕ ಶ್ರೀಕಂಠಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.