ಬೆಂಗಳೂರು: ಮಳವಳ್ಳಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕೋರಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಿತು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಎಎಪಿ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, “ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಅಕ್ಟೋಬರ್ 11, 2022ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಕೊಲೆ ಬಳಿಕ ಆಕೆಯ ಮೃತದೇಹವನ್ನು ನಿರ್ಮಾಣ ಹಂತದ ಕಟ್ಟಡದ ಸಂಪ್ ಒಳಗೆ ಎಸೆದು ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಘಟನೆಗೆ ಸಂಬಂಧಿಸಿ ಕಾಂತರಾಜು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ದುಷ್ಕೃತ್ಯ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯು ಈ ಹಿಂದೆಯೂ ಇಂತಹ ದುಷ್ಕೃತ್ಯ ಎಸಗಿದ್ದರೂ ಆತನ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಪರಿಣಾಮ ಈಗ ಮಳವಳ್ಳಿಯ ಅಮಾಯಕ ಬಾಲಕಿ ಆತನಿಂದ ಬಲಿಯಾಗಿದ್ದಾಳೆ ಎಂದು ಹೇಳಿದರು.
ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸ್ ಇಲಾಖೆಯ ವೈಫಲ್ಯವು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಬಾಲಕಿಯ ಅತ್ಯಾಚಾರ ಹಾಗೂ ಕೊಲೆಗೆ ಕಾರಣರಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸುವುದು ಕಡಿಮೆಯಾಗುತ್ತದೆ ಎಂದು ಕುಶಲಸ್ವಾಮಿ ಹೇಳಿದರು.
ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದರಲ್ಲಿ ರಾಜ್ಯ ಗೃಹ ಇಲಾಖೆ ವಿಫಲವಾಗಿದೆ. ಇದರಿಂದಾಗಿ ಕಾಮುಕರಿಗೆ ಕಾನೂನಿನ ಭಯವೇ ಇಲ್ಲವಾಗಿದೆ. ಮಾಧ್ಯಮಗಳಲ್ಲಿ ದೊಡ್ಡದಾಗಿ ವರದಿಯಾಗುವ ಪ್ರಕರಣಗಳನ್ನಷ್ಟೇ ಗಂಭೀರವಾಗಿ ಪರಿಗಣಿಸಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರವಾದಾಗ, ಸಂತ್ರಸ್ತೆಯು ಆ ವೇಳೆ ಅಲ್ಲಿಗೆ ಬಂದಿದ್ದೇ ತಪ್ಪೆಂಬಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತಾನಾಡಿದ್ದರು. ಗೃಹ ಸಚಿವರ ಇಂತಹ ಮನಸ್ಥಿತಿಯಿಂದಾಗಿ ಕಾಮುಕರಿಗೆ ಹೆದರಿಕೆ ಇಲ್ಲದಂತಾಗಿದೆ ಎಂದರು.