ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ಎಫ್‌ಆರ್‌ಪಿ ದರ ನಿಗದಿ ಪಡಿಸಬೇಕು ಹಾಗೂ ಲೀಟರ್ ಹಾಲಿಗೆ 40 ರೂಪಾಯಿ ಕನಿಷ್ಠ ಬೆಲೆ ನೀಡಬೇಕೆಂದು ಆಗ್ರಹಿಸಿ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಭಾಗವಹಿಸಿ, ಬೆಂಬಲ ಸೂಚಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಪೃಥ್ವಿ ರೆಡ್ಡಿ, “ಕಳೆದ 16 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದಿರುವುದು ಅತ್ಯಂತ ಬೇಸರ. ಈ 40% ಸರ್ಕಾರಕ್ಕೆ ಭ್ರಷ್ಟಾಚಾರ ಮಾಡುವುದೊಂದೇ ಗುರಿಯಾಗಿದ್ದು, ರೈತರ ಹಿತ ಮುಖ್ಯವಾಗಿಲ್ಲ. ಪಂಜಾಬ್‌ನ ಆಮ್ ಆದ್ಮಿ ಪಾರ್ಟಿ ಸರ್ಕಾರವು ಕಬ್ಬಿನ ಎಫ್‌ಆರ್‌ಪಿಯನ್ನು 3,800 ರೂಪಾಯಿಗೆ ಏರಿಕೆ ಮಾಡಿದೆ. ಕರ್ನಾಟಕ ಸರ್ಕಾರ ಕೂಡ ಎಫ್‌ಆರ್‌ಪಿ ಪರಿಷ್ಕರಣೆ ಮಾಡಿ ರೈತರಿಗೆ ನೆರವಾಗಬೇಕು” ಎಂದು ಆಗ್ರಹಿಸಿದರು.
“ಇಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕತ್ವವು ಶಾಸಕರುಗಳು ಹಾಗೂ ಸಚಿವರುಗಳಿಗೆ ಸೇರಿವೆ. ಹಾಗಾಗಿ ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಭಾವನೆಗಳಿಗೆ ಬೆಲೆ ಬರಬೇಕಾದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸರ್ಕಾರದ ಬದಲು ರೈತರ ಹಿತ ಬಯಸುವವರ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಮೃತ ಯೋಧರ ಮನೆಗೆ ಭೇಟಿ: ಮಂಡ್ಯ ತಾಲೂಕಿನ ಕಾರೆಮನೆ ಗೇಟ್ ಬಳಿ ರಸ್ತೆಗುಂಡಿ ತಪ್ಪಿಸಲು ಹೋಗಿ ಅಪಘಾತಗೊಂಡು ಮೃತಪಟ್ಟ ಸಾತನೂರು ಗ್ರಾಮದ ಬೀರೇಶ್ವರ ಬಡಾವಣೆಯ ನಿವೃತ್ತ ಯೋಧ ಎಸ್.ಎನ್.ಕುಮಾರ್ ಮನೆಗೆ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಿಯೋಗ ಭೇಟಿ ನೀಡಿ, ಸಾಂತ್ವನ ಹೇಳಿದರು.
“ರಸ್ತೆಗುಂಡಿಯು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ, ಇದು ಇಡೀ ರಾಜ್ಯದ ಸಮಸ್ಯೆ. ಭ್ರಷ್ಟ ಬಿಜೆಪಿ ಸರ್ಕಾರದ ಲೂಟಿಕೋರರ ಜನಪ್ರತಿನಿಧಿಗಳಿಂದಾಗಿ ರಾಜ್ಯಾದ್ಯಂತ ರಸ್ತೆಗಳು ಗುಂಡಿಮಯವಾಗಿವೆ. ಮುಂದಿನ ಚುನಾವಣೆಯಲ್ಲಿ ಪ್ರಾಮಾಣಿಕ ಪಕ್ಷವನ್ನು ಗೆಲ್ಲಿಸುವುದೊಂದೇ ಇದಕ್ಕಿರುವ ಪರಿಹಾರ. ಮುಖ್ಯಮಂತ್ರಿಯವರಿಗೆ ಮಾಜಿ ಯೋಧರ ಬಗ್ಗೆ ಕಾಳಜಿಯಿದ್ದರೆ ಇಲ್ಲಿಗೆ ಬಂದು ಸೂಕ್ತ ಪರಿಹಾರ ನೀಡಲಿ” ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಎಎಪಿ ಮುಖಂಡರಾದ ಸಂಚಿತ್ ಸವ್ಹಾನಿ, ಮೋಹನ್ ದಾಸರಿ, ಜಗದೀಶ್ ವಿ ಸದಂ, ದರ್ಶನ್ ಜೈನ್, ಅಬ್ದುಲ್ ರಜಾಕ್ ಮಾರ್ಡಾಲ, ಮಂಡ್ಯದ ಸ್ಥಳೀಯ ನಾಯಕರಾದ ಮಹದೇವ ಸ್ವಾಮಿ, ವಕೀಲರಾದ ಬೊಮ್ಮಯ್ಯ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.