ಬೆಂಗಳೂರು: ಪೊಲೀಸ್ ಇನ್ಸ್‌ಪೆಕ್ಟರ್ ಆಗಲು 70 ಲಕ್ಷ ರೂ. ಲಂಚ ನೀಡಿರುತ್ತಾರೆ ಎಂಬ ಎಂಟಿಬಿ ನಾಗರಾಜ್ ಹೇಳಿಕೆಯಿಂದಾಗಿ ರಾಜ್ಯ ಬಿಜೆಪಿ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಸಾಬೀತಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ “ಹೃದಯಘಾತದಿಂದ ಮೃತಪಟ್ಟ ಇನ್‌ಸ್ಪೆಕ್ಟರ್ ಎಚ್.ಎಲ್.ನಂದೀಶ್‌ರವರ ಅಂತಿಮ ದರ್ಶನ ಪಡೆಯಲು ಹೋಗುತ್ತಿದ್ದ ಸಂದರ್ಭದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಆಗಲು 70 ಲಕ್ಷ ರೂ. ನೀಡಿದ್ದರೆಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜವಾಬ್ದಾರಿಯುತ ಹುದ್ದೆಗಳನ್ನು ಬೃಹತ್ ಮೊತ್ತದ ಹಣಕ್ಕೆ ಮಾರಾಟ ಮಾಡಲಾಗುತ್ತಿರುವುದು ಸಚಿವರ ಮಾತಿನಿಂದ ಸಾಬೀತಾಗಿದೆ. 40% ಭ್ರಷ್ಟಾಚಾರ ಆರೋಪಕ್ಕೆ ಇಷ್ಟು ದಿನ ಸಾಕ್ಷಿ ಕೇಳುತ್ತಿದ್ದ ಬಿಜೆಪಿ ನಾಯಕರಿಗೆ ಅವರ ಸಚಿವರೇ ಬಾಯ್ಬಿಟ್ಟಿರುವುದರಿಂದ ಸಾಕ್ಷಿ ಸಿಕ್ಕಂತಾಗಿದೆ ಎಂದು ಹೇಳಿದರು.
70 ಲಕ್ಷ ರೂಪಾಯಿ ಹಣ ಪಡೆದು ಇನ್ಸ್‌ಪೆಕ್ಟರ್ ಹುದ್ದೆ ನೀಡುತ್ತಿರುವ ಕುರಿತು ಸಚಿವ ಎಂಟಿಬಿ ನಾಗರಾಜ್ ನೀಡಿದ ಹೇಳಿಕೆ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ಸರ್ಕಾರಿ ಹುದ್ದೆ ಪಡೆಯಲು ನೀಡುವ ಲಕ್ಷಗಟ್ಟಲೆ ಹಣದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎಂಬುದು ಬಹಿರಂಗವಾಗಬೇಕು.
ಅದಕ್ಕಿಂತ ಮೊದಲು ಎಂಟಿಬಿ ನಾಗರಾಜ್ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಭ್ರಷ್ಟಾಚಾರವನ್ನು ಸಚಿವರೇ ಒಪ್ಪಿಕೊಂಡಿರುವುದರಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜಗದೀಶ್ ವಿ. ಸದಂ ಒತ್ತಾಯಿಸಿದರು.
ಸರ್ಕಾರದ ಭ್ರಷ್ಟಾಚಾರವನ್ನು ಮಾಧ್ಯಮಗಳು ಬಯಲು ಮಾಡಬಾರದೆಂದು ಬಿಜೆಪಿಯು ಹಲವು ಪತ್ರಕರ್ತರಿಗೆ 2.5 ಲಕ್ಷ ರೂಪಾಯಿಯನ್ನು ದೀಪಾವಳಿ ಉಡುಗೊರೆಯೆಂದು ನೀಡಲಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರವನ್ನು ಬಿಜೆಪಿ ಹಾಳು ಮಾಡುತ್ತಿದೆ.
40% ಕಮಿಷನ್ ಹಣವನ್ನು ಈ ರೀತಿಯ ಪ್ರಜಾಪ್ರಭುತ್ವವಿರೋಧಿ ಕೃತ್ಯಳಿಗೆ ಬಿಜೆಪಿ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಕೆಲವು ಪತ್ರಕರ್ತರು ಬಿಜೆಪಿಯ ಈ ಆಮಿಷವನ್ನು ವಾಪಸ್ ಮಾಡಿರುವುದು ಶ್ಲಾಘನೀಯ ಎಂದರು.