
ನ್ಯೂಡೆಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನೂತನ ಕರ್ನಾಟಕ ಭವನ (ಕಾವೇರಿ) ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಬುಧವಾರ ಅಂದರೆ ನಾಳೆ ಸಂಜೆ 6:30ಕ್ಕೆ ನಡೆಯಲಿದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭವ್ಯ ಕಟ್ಟಡ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿರುವರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೌರವ ಆಹ್ವಾನಿತರಾಗಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ.
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತರಾಮನ್ ಅವರಿನ್ನೂ ಆಹ್ವಾನಿಸಿದೆ. ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ ಕೂಡಾ ಭಾಗಿಯಾಗಲಿದ್ದಾರೆ.
ಕರ್ನಾಟಕ ಭವನದ ವಿಶೇಷತೆಗಳು: ದೆಹಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯಲ್ಲಿ (Chanakyapuri) ನಿರ್ಮಾಣವಾಗಿರುವ ಈ ಕಟ್ಟಡವು 3,532 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 12,212 ಚದರ ಮೀಟರ್ (1,31,450 ಚದರ ಅಡಿ) ನಿರ್ಮಾಣ ಪ್ರದೇಶವನ್ನು ಒಳಗೊಂಡಿರುವ ಈ ಭವನವು 2ಬಿ+ಜಿ+6ಯು ರಚನೆಯಲ್ಲಿ 9 ಅಂತಸ್ತುಗಳನ್ನು ಹೊಂದಿದೆ.
ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿದ್ದು, ಅದರಲ್ಲಿ 2 ವಿವಿಐಪಿ ಸೂಟ್‌ಗಳು, 32 ಸೂಟ್ ರೂಂಗಳು ಮತ್ತು 18 ಸಿಂಗಲ್ ರೂಂಗಳು ಸೇರಿವೆ. ಇದರ ಜೊತೆಗೆ 86 ಶೌಚಾಲಯಗಳು ಮತ್ತು ಬೇಸ್‌ಮೆಂಟ್‌ನಲ್ಲಿ 10 ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಯೋಜನೆಯು 2018ರಲ್ಲಿ ಆರಂಭವಾಗಿದ್ದು, ಇದಕ್ಕಾಗಿ 81.00 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಕಾಮಗಾರಿ ಅಂತ್ಯದ ವೇಳೆಗೆ ಯೋಜನೆಯ ವೆಚ್ಚ 138 ಕೋಟಿ ರೂ. ತಲುಪಿದೆ.
ಕಟ್ಟಡದ ಒಟ್ಟು 10 ಮಹಡಿಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ: ಕೆಳಗಿನ ಬೇಸ್‌ಮೆಂಟ್ (2335 ಚ.ಮೀ.): ಲಿಫ್ಟ್ ಲಾಬಿ, ಸ್ಟೇರ್‌ಕೇಸ್, ಡ್ರೈವರ್ ಲಾಂಡ್ರಿ, ಸೆಕ್ಯುರಿಟಿ ರೂಂ, ಬಿಎಂಎಸ್ ರೂಂ, 50 ಕಾರ್ ಪಾರ್ಕಿಂಗ್ ಸ್ಥಳವಿದೆ.
ಮೇಲಿನ ಬೇಸ್‌ಮೆಂಟ್ (2335 ಚ.ಮೀ.): ಸ್ಟೇರ್‌ಕೇಸ್, ಸ್ಟಾಫ್ ರೂಂ, 24 ಕಾರ್ ಪಾರ್ಕಿಂಗ್ ಸ್ಥಳ, ಸ್ಟಾಫ್ ರೆಸ್ಟ್ ರೂಂ ಇದೆ.
ಗ್ರೌಂಡ್ ಫ್ಲೋರ್ (1050 ಚ.ಮೀ.): ರಿಸೆಪ್ಷನ್, ವೇಟಿಂಗ್ ರೂಂ, ಬೋರ್ಡ್ ರೂಂ, ಪ್ಯಾಂಟ್ರಿ, ಮೀಡಿಯಾ ಬ್ರೀಫಿಂಗ್, ವಿಐಪಿ ಲಾಂಜ್, ಟಾಯ್ಲೆಟ್, ಫೈರ್ ಕಂಟ್ರೋಲ್ ರೂಂ, ಟೂರಿಸಂ ಇನ್ಫೊ ಡೆಸ್ಕ್, ಸೆಕ್ಯುರಿಟಿ ರೂಂ ಇದೆ.
ಮೊದಲನೇ ಮಹಡಿ (1005 ಚ.ಮೀ.): ಆರ್‌ಸಿ ಚೇಂಬರ್, ಡಿಆರ್‌ಸಿ, ಪಿಎ ರೂಂ, ಸ್ಟಾಫ್ ರೂಂ, ಆಡಳಿತಾತ್ಮಕ ದಾಖಲೆ ಕೊಠಡಿ, ಸರ್ವರ್ ರೂಂ, ಪ್ಯಾಂಟ್ರಿ, ಲಿಯಾಸನ್ ಆಫೀಸರ್ ರೂಂ, ಕಾನ್ಫರೆನ್ಸ್ ರೂಂ ಇದೆ.
ಎರಡನೇ ಮಹಡಿ (1050 ಚ.ಮೀ.): 3 ಸೂಟ್ ರೂಂಗಳು, 4 ಸಿಂಗಲ್ ರೂಂಗಳು, ಎಡ್ ಸ್ಪೆಷಲ್ ರಿಪ್ರೆಸೆಂಟೇಟಿವ್, ಪಿಎ ರೂಂ, ಲೀಗಲ್ ರೆಕಾರ್ಡ್ ರೂಂ ಇದೆ.
ಮೂರನೇ ಮಹಡಿ (1050 ಚ.ಮೀ.): 8 ಸೂಟ್ ರೂಂಗಳು, 3 ಸಿಂಗಲ್ ರೂಂಗಳು, ಜಿಮ್, ಪ್ಯಾಂಟ್ರಿ. ನಾಲ್ಕನೇ ಮಹಡಿ (1050 ಚ.ಮೀ.): 9 ಸೂಟ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.
ಐದನೇ ಮಹಡಿ (1050 ಚ.ಮೀ.): 6 ಸೂಟ್ ರೂಂಗಳು, 4 ಸಿಂಗಲ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.
ಆರನೇ ಮಹಡಿ (1050 ಚ.ಮೀ.): 6 ಸೂಟ್ ರೂಂಗಳು, 3 ಸಿಂಗಲ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.
ಏಳನೇ ಮಹಡಿ (237.00 ಚ.ಮೀ.): ಟೆರೇಸ್, ಸ್ಟೇರ್‌ಕೇಸ್ ರೂಂ, ಸೌರ ಶಕ್ತಿ ಘಟಕಗಳನ್ನು ಹೊಂದಿದೆ.
ಕರ್ನಾಟಕ ಭವನ (ಕಾವೇರಿ) ದೆಹಲಿಗೆ ಭೇಟಿ ನೀಡುವ ಕರ್ನಾಟಕದ ಸರ್ಕಾರಿ ಅಧಿಕಾರಿಗಳು, ಗಣ್ಯರು ಮತ್ತು ಸಾರ್ವಜನಿಕರಿಗೆ ಆರಾಮದಾಯಕ ಆತಿಥ್ಯ ಸೌಲಭ್ಯವನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ಭವನವು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಜತೆಗೆ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.