ಬೆಂಗಳೂರು: ಸೆಪ್ಟೆಂಬರ್ 21 ರಿಂದ ಕೇಂದ್ರ ಸರ್ಕಾರ 9ರಿಂದ 12ನೇ ತರಗತಿಗಳನ್ನು ಆರಂಭಿಸಲು ಸೂಚನೆ ನೀಡಿದ ಹೊರತಾಗಿಯೂ ವಿದ್ಯಾರ್ಥಿಗಳನ್ನು ಶಾಲೆಯಿಂದ ದೂರ ಇಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.
ವಿದ್ಯಾರ್ಥಿಗಳು ಶಾಲೆಗೆ ತೆರಳಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಇದೇ ವಿಚಾರವಾಗಿ ನಿರ್ಧಾರ ಕೈಗೊಂಡಿರುವ ಕರ್ನಾಟಕ ಸರ್ಕಾರ 9 ರಿಂದ 12ನೇ ತರಗತಿಗಳ ಶಾಲೆ ಪ್ರವೇಶಕ್ಕೆ ಮೊನ್ನೆ ಅನುಮತಿ ನಿರಾಕರಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ವರೆಗೂ ಮಕ್ಕಳು ಶಾಲೆಗೆ ಭೇಟಿ ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಖಾಸಗಿ ಶಾಲೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ಮಾತನಾಡಿರುವ ಕರ್ನಾಟಕದ ಇಂಗ್ಲಿಷ್ ಮಾಧ್ಯಮ ಶಾಲೆಗಳ ನಿರ್ವಹಣಾ ಮಂಡಳಿಯ ಶಶಿಕುಮಾರ್, ‘ವಿದ್ಯಾರ್ಥಿಗಳನ್ನು ಶಾಲೆಗಳಿಂದ ದೂರ ಇಡುವ ಸರ್ಕಾರದ ನಿರ್ಧಾರ ಸರಿಯಲ್ಲ. ಸ್ವತಃ ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳ ಶಾಲೆ ಪ್ರವೇಶಕ್ಕೆ ಅವಕಾಶ ನೀಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಯಾವುದೇ ಶಾಲೆ ಪ್ರಾರಂಭಿಸಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಆದರೆ ಖಾಸಗಿ ಶಾಲೆಗಳು ಶಾಲೆ ಪುನಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಹಲವಾರು ಶಾಲೆಗಳು ಈಗಾಗಲೇ ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡಲು, ಶಿಕ್ಷಕರನ್ನು ಸಿದ್ಧಪಡಿಸಲು ಮತ್ತು ಪೋಷಕರಿಂದ ಅನುಮೋದನೆ ಪತ್ರಗಳನ್ನು ಪಡೆಯಲು ಸಾವಿರಾರು ರೂ.ಗಳನ್ನು ಖರ್ಚು ಮಾಡಿವೆ. ಸರ್ಕಾರದ ವಿದ್ಯಾಗಾಮ ಯೋಜನೆಯಿಂದ ಖಾಸಗಿ ಶಾಲೆಗಳ ಆದಾಯಕ್ಕೆ ಕೊಡಲಿ ಪೆಟ್ಟು ಬೀಳಲಿದ್ದು, ಇದರಿಂದ ಖಾಸಗಿ ಶಾಲೆಗಳಿಗೆ ಅನಾನುಕೂಲವಾಗಲಿದೆ. ವಿದ್ಯಾರ್ಥಿಗಳನ್ನು ವಿದ್ಯಾಗಾಮ ಯೋಜನೆಯತ್ತ ಆಕರ್ಷಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ವಿದ್ಯಾಗಾಮ ಯೋಜನೆ ಮೂಲಕ ಸರ್ಕಾರ ಶಿಕ್ಷಕರನ್ನೇ ವಿದ್ಯಾರ್ಥಿಗಳ ಬಳಿಗೆ ಕಳುಹಿಸಿ ಬಯಲಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಲಾಗುತ್ತಿದೆ. ಇದು ಖಾಸಗಿ ಶಾಲೆಗಳ ಕೆಂಗಣ್ಣಿಗೆ ಗುರಿಯಾಗಿದೆ.
Eno guri agilla bidi