ಬೆಂಗಳೂರು: ಸೆಪ್ಟೆಂಬರ್ ಅಂತ್ಯದವರೆಗೂ ಶಾಲಾ ಕಾಲೇಜು ಭೇಟಿಗೆ ಅವಕಾಶವಿಲ್ಲ. ಆ ನಂತರ ಪರಿಸ್ಥಿತ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತುರ್ತು ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರದ ಅನ್‌ಲಾಕ್ 4.0 ಮಾರ್ಗಸೂಚಿ ಅನುಸಾರ ಫ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೆ.21ರಿಂದ ಶಾಲಾ-ಕಾಲೇಜಿಗೆ ಭೇಟಿಗೆ ಅವಕಾಶ ನೀಡುವ ತನ್ನ ನಿರ್ಧಾರವನ್ನು ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂಪಡೆದಿದೆ.
ಕೇಂದ್ರದ ಅನ್‌ಲಾಕ್ 4.0ರ ಮಾರ್ಗಸೂಚಿ ಪ್ರಕಾರ ಕಂಟೈನ್ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ 9-12ನೇ ತರಗತಿ ವಿದ್ಯಾರ್ಥಿಗಳು ಸೆ.21ರಿಂದ ಶಾಲಾ ಕಾಲೇಜಿಗೆ ಭೇಟಿ ನೀಡಿ ಶಿಕ್ಷಕರಿಂಗ ಮಾರ್ಗದರ್ಶನ ಪಡೆದುಕೊಳ್ಳಲು ಅನುಮತಿ ನೀಡಿತ್ತು. ಈ ಪ್ರಕಾರ ರಾಜ್ಯದ ಸರ್ಕಾರಿ, ಅನುದಾನಿಕ ಮತ್ತು ಅನುದಾನ ರಹಿತ ಪ್ರೌಢಶಾಲಾ ಮತ್ತು ಪಿಯು ಕಾಲೇಜುಗಳು ಸೆ.21ರಿಂದ ಆರಂಭಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದಿತ್ತು.
ಆದರೆ, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಪರಿಸ್ಥಿತಿಯನ್ನು ವಿವರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ಹೆಚ್ಚಳವಾಗುತ್ತಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನೀಡುವುದು ಕ್ಷೇಮಕರವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಸೆಪ್ಟೆಂಬರ್ ಅಂತ್ಯದವರೆಗೂ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ವಿದ್ಯಾರ್ಥಿಗಳ ಭೇಟಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಆದೇಶಿಸಿದ್ದಾರೆ.
ರಾಜ್ಯದ ಖಾಸಗಿ ಶಾಲಾಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ ಯೋಜನೆ ಕುರಿತು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಬೋಧಕ ಸಿಬ್ಬಂದಿ ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ. ದಾಖಲಾತಿ ಪ್ರಕ್ರಿಯೆ ಕೂಡ ನಡೆಯುತ್ತಿರುವುದರಿಂದ ಶಾಲಾ-ಕಾಲೇಜುಗಳು ತೆರೆದಿರುತ್ತವೆ. ಆದರೆಯ ವಿದ್ಯಾರ್ಥಿಗಳು ಭೇಟಿ ನೀಡುವಂತಿಲ್ಲ ಎಂದು ಉಮಾಶಂಕರ್ ಸ್ಪಷ್ಟಪಡಿಸಿದ್ದಾರೆ.