ರಾಮನಗರ: ಭೈರಮಂಗಲ ಜಲಾಶಯದ ಬಲದಂಡೆ ನಾಲೆಗಳ ಅಭಿವೃದ್ಧಿ ಕಾಮಗಾರಿ ಶೇ.70 ಪೂರ್ಣವಾಗಿದ್ದು, ಒಂದೂವರೆ ತಿಂಗಳೊಳಗೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಭೈರಮಂಗಲ ಜಲಾಶಯದ ಕಾಮಗಾರಿಗಳನ್ನು ಪರಿವೀಕ್ಷಿಸಿದ ನಂತರ ಮಾತನಾಡಿ, ಬಲದಂಡೆ ನಾಲಾ ಕಾಮಗಾರಿ ಪೂರ್ಣಗೊಂಡ ನಂತರ ಎಡದಂಡೆ ನಾಲಾ ಕಾಮಗಾರಿ ಪ್ರಾರಂಭಿಸಲಾಗುವುದು. ಕಾಮಗಾರಿ ಕೈಗೊಳ್ಳಲು ಯಾವುದೇ ರೀತಿಯ ತೊಂದರೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸ್ವಲ್ಪ ನಿಧಾನವಾಗಿರಬಹುದು. ಒಂದು ವರ್ಷದೊಳಗಾಗಿ ಎರಡು ನಾಲೆಗಳ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.
ಈ ಯೋಜನೆಯ ಬಗ್ಗೆ ಚರ್ಚಿಸಲಾಗುತ್ತಿದೆ. ಸಿವೇಜ್ ಹಾಗೂ ಟ್ರೀಟ್ ಮೆಂಟ್ ನಂತರ ಎಷ್ಟು ನೀರು ಸಿಗುತ್ತದೆ ಎಂದು ಅಂದಾಜಿಸಬೇಕು. ಸದ್ಯದ ಸ್ಥಿತಿಯಲ್ಲಿ 4000 ಎಕರೆಗೆ ನೀರು ನೀಡಬಹುದು ಎಂದರು.
ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಸುಮಾರು 100 ಕೆರೆಗಳಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಅಭಿವೃದ್ಧಿ ಪಡಿಸುವಂತೆ ಕೋರಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.
100 ಎಕರೆಗಿಂತ ಅಚ್ಚುಕಟ್ಟು ಪ್ರದೇಶಕ್ಕಿಂತ ಹೆಚ್ಚಿರುವ ಕೆರೆಗಳು ಮಾತ್ರ ಸಣ್ಣ ನೀರಾವರಿ ಇಲಾಖೆಯಿಂದ ಪುನಶ್ಚೇತನಗೊಳಿಸಬಹುದು. ಸಣ್ಣ ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರಲಿದ್ದು, ಜಿಲ್ಲಾ ಪಂಚಾಯತ್ ಅವರು ಸಣ್ಣ ನೀರಾವರಿ ಇಲಾಖೆಗೆ ನೀಡಿದರೆ ಅಭಿವೃದ್ಧಿ ಪಡಿಸಿಕೊಡಲಾಗುವುದು ಎಂದರು.
ಭೈರಮಂಗಲ ಜಲಾಶಯದ ಎಡದಂಡೆ ಕಾಲುವೆಯ ಉದ್ದ 26 ಕಿ.ಮೀ ಮತ್ತು ಬಲದಂಡೆಯ ಕಾಲುವೆಯ ಉದ್ದ 9 ಕಿ.ಮೀ ನ್ನು ಆರ್.ಸಿ.ಸಿ ಬಾಕ್ಸ್ ಟೈಪ್ ಕಾಲುವೆಯ ನಿರ್ಮಾಣ ಕಾಮಗಾರಿಯನ್ನು 129 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದು, ಕಾಮಗಾರಿಯನ್ನು ಸಚಿವರು ಪರಿವೀಕ್ಷಿಸಿದರು.
ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಕೊಟ್ರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.