ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಚುನಾವಣೆ ಸಮೀಪಿಸುತ್ತಿರುವ ಪಶ್ಚಿಮಬಂಗಾಳದಲ್ಲಿ ಅಭಿಯಾನ ನಡೆಸಲು ಮುಂದಾಗಿದ್ದಾರೆ.
ಕೃಷಿ ಕಾಯ್ದೆಗಳ ಪರ ಮಾತನಾಡುವವರನ್ನು ಸೋಲಿಸಿ ಎಂದು ಕರೆ ನೀಡಲು ಪಶ್ಚಿಮಬಂಗಾಳದಲ್ಲಿ ಅಭಿಯಾನ ನಡೆಸಲಿದ್ದಾರೆ. ಅಭಿಯಾನಕ್ಕೆ ಸಂಬಂಧಿಸಿದ ವೇಳಾಪಟ್ಟಿ ಬಿಡುಗಡೆ ಮಾಡಿದೆ. ರೈತ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಬಲ್ಬೀರ್ ಸಿಂಗ್, ರಾಜೃವಾಲ್, ಗರ್ನಾಮ್ ಸಿಂಗ್ ಚಾದುನಿ ಹಾಗೂ ಯೋಗೇಂದ್ರ ಯಾದವ್ ಅವರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.
ಈ ನಾಯಕರು ಕೋಲ್ಕತ್ತಾ, ನಂದಿಗ್ರಾಮ ಮತ್ತು ಸಿಂಗೂರಿನಲ್ಲಿ ಸಾರ್ವಜನಿಕ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಅಭಿಯಾನ ಮೂರು ದಿನಗಳಕಾಲ ನಡೆಯಲಿದೆ.
ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪಶ್ಚಿಮಬಂಗಾಳದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲಿಯೂ ಅಭಿಯಾನ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಂಬರ್ 26ರಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜತೆ 11 ಸುತ್ತಿನ ಮಾತುಕತೆ ನಡೆದಿದ್ದು, ಅವೆಲ್ಲವೂ ವಿಫಲವಾಗಿವೆ.