ಬೆಂಗಳೂರು: ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ನಿರಂತರ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅವರ ಕುಟುಂಬದ ಕ್ಷಮೆಯಾಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಕೃಷಿಗೆ ಸಂಬಂಧಿಸಿದ ವಿವಾದಿತ ಕಾಯಿದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪೃಥ್ವಿ ರೆಡ್ಡಿ, “ಬಹುಮತವಿರುವ ಅಹಂಕಾರದಲ್ಲಿ ಜನವಿರೋಧಿ ಹಾಗೂ ರೈತವಿರೋಧಿಯಾಗಿ ಮೆರೆಯುತ್ತಿದ್ದ ಸರ್ಕಾರಕ್ಕೆ ಕೊನೆಗೂ ಹಿನ್ನಡೆಯಾಗಿದೆ ಎಂದರು.
ಇನ್ನಾದರೂ ಸರ್ಕಾರವು ಕೃಷಿ ವಿಚಾರದಲ್ಲಿ ದೊಡ್ಡದೊಡ್ಡ ಉದ್ಯಮಿಗಳ ಪರ ಯೋಚಿಸುವ ಬದಲು ರೈತರ ಪರ ಯೋಚಿಸಿ ನಿಲುವು ತೆಗೆದುಕೊಳ್ಳಲಿ ಎಂದ ಅವರು, ಸುದೀರ್ಘ ಪ್ರತಿಭಟನೆ ಮೂಲಕ ಯಶಸ್ಸು ಗಳಿಸಿದ ಎಲ್ಲ ರೈತರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕೇಂದ್ರ ಸರ್ಕಾರವು ಕೋವಿಡ್ ಹಾಗೂ ಲಾಕ್‌ಡೌನ್ ಸಮಯವನ್ನು ದುರುಪಯೋಗಪಡಿಸಿಕೊಂಡು ಸುಗ್ರೀವಾಜ್ಞೆ ಮೂಲಕ ವಿವಾದಿತ ಕಾಯಿದೆಗಳನ್ನು ಜಾರಿಗೆ ತಂದಿತ್ತು. ಕೋವಿಡ್ ಆತಂಕವಿದ್ದ ಸಂದರ್ಭದಲ್ಲಿ ಬಹಳ ಮುನ್ನೆಚ್ಚರಿಕೆ ವಹಿಸಿ ಹಾಗೂ ಅನೇಕ ಸವಾಲುಗಳನ್ನು ಎದುರಿಸಿ ರೈತರು ಪ್ರತಿಭಟಿಸಿದ್ದರು.
ಈ ವೇಳೆ 700ಕ್ಕೂ ಹೆಚ್ಚು ಅಮಾಯಕ ರೈತರು ಪ್ರತಿಭಟನೆಯಲ್ಲಿ ಮೃತಪಟ್ಟಿದ್ದಾರೆ. ಇಷ್ಟೆಲ್ಲ ಆದರೂ ಸುಮ್ಮನಿದ್ದ ಪ್ರಧಾನಿ ಮೋದಿಯವರು ಈಗ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ.
ಈ ರೀತಿ ಕೇವಲ ಚುನಾವಣೆಗಾಗಿ ರೈತರ ಪರ ನಿಲುವು ತೆಗೆದುಕೊಳ್ಳುವ ಸರ್ಕಾರವು ನಂಬಿಕೆಗೆ ಯೋಗ್ಯವಲ್ಲ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ರೈತರಿಗೆ ಬೆಂಬಲವಾಗಿದ್ದೆವು. ಅನ್ನದಾತರ ಗೆಲುವು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.