ಬೆಂಗಳೂರು: ತೀವ್ರ ವಿರೋಧ ಮತ್ತು ರೈತ ಸಂಘಗಳ ಪ್ರತಿಭಟನೆ ನಡುವೆಯೇ ಕರ್ನಾಟಕ ವಿಧಾನಸಭೆ ಭೂ ಸುಧಾರಣಾ ಕಾಯ್ದೆ, ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಿದೆ.
ರೈತ ಸಂಘಟನೆಗಳು ಮತ್ತು ವಿಪಕ್ಷಗಳ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿದೆ. ಆದರೆ ಇದು ರೈತರ ಮರಣ ಶಾಸನ ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿದರಲ್ಲದೆ, ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ಎರಡೂ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತ ಸಂಘಟನೆಗಳು ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ರಾಜ್ಯ ಬಂದ್ಗೆ ಕರೆ ನೀಡಿವೆ.
ರೈತರಿಗೆ ಇದರಿಂದ ಯಾವುದೇ ಕಾರಣಕ್ಕೂ ತೊಂದರೆಯಾಗದು ಎಂದು ಮಸೂದೆ ಮಂಡಿಸಿದ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರೈತರ ಸಹಿತ ಬಹುತೇಕರ ವಿರೋಧವಿದೆ. ಯಾವ ಉದ್ದೇಶಕ್ಕಾಗಿ ಭೂ ಸುಧಾರಣೆ ಕಾಯ್ದೆಯನ್ನು ದೇವರಾಜ ಅರಸು ತಂದಿದ್ದರೋ ಆ ಮೂಲ ಆಶಯಕ್ಕೆ ಇದು ವಿರುದ್ಧವಾಗಿದೆ. ಇದರ ಹಿಂದೆ ಬೇರೆಯದೇ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಸಹಮತ
ಅಚ್ಚರಿ ಬೆಳವಣಿಗೆಯಲ್ಲಿ ಈ ಮಸೂದೆಗೆ ಜೆಡಿಎಸ್ ಸಹಮತ ವ್ಯಕ್ತಪಡಿಸಿತು. ಆದರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಈ ಮಸೂದೆಯನ್ನು ಕೊರೊನಾ ಸಂದರ್ಭದಲ್ಲಿ ಸುಗ್ರಿವಾಜ್ಞೆ ಮೂಲಕ ತಂದ ಅಗತ್ಯದ ಬಗ್ಗೆ ಪ್ರಶ್ನಿಸಿದರು. ಜಮೀನು ಖರೀದಿ ಮಿತಿ ಹೆಚ್ಚು ಮಾಡಿರುವುದರಿಂದ ಮತ್ತೆ ಜಮೀನ್ದಾರಿ ಪದ್ಧತಿಯತ್ತ ಹೋಗುವಂತಾಗುತ್ತದೆ ಎಂದು ಹೇಳಿದರಾದರೂ ಇದರಿಂದ ರೈತರಿಗೆ ಎಷ್ಟು ಅನುಕೂಲ ಎಂಬ ಬಗ್ಗೆ ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು.
ಇನ್ನು ತಲೆ ಬಳಿಸಿಕೊಂಡು ತಿನ್ನುವುದಕ್ಕೆ ನಾವು ಕಡಿವಾಣ ಹಾಕಿದ್ದೇವೆ. ಜತೆಗೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ಕಾಯ್ದೆಗಳಿಗೆ ತಿದ್ಗದುಪಡಿ ತರುವುದು ಅನಿವಾರ್ಯವಾಗಿತ್ತು ಎಂದು ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.