ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಆದ್ರೂ ಸೋಂಕಿತರ ಚಿಕಿತ್ಸೆ ನೀಡುವಲ್ಲಿ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ.
ಹೌದು! ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರು ಈ ಬಗ್ಗೆ ಕಿಡಿಕಾರಿದ್ದು, ಆಸ್ಪತ್ರೆಗಳ ವಿರುದ್ಧ ಆರೋಪ ಮಾಡಿದ್ದಾರೆ.
ಈ ಎರಡೂ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ನಮಗೆ ಮೂಲಭೂತ ವ್ಯವಸ್ಥೆ ಇಲ್ಲ ಎಂದು ಸೋಂಕಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ. 30-40 ಸೋಂಕಿತರಿರುವ ಕೊಠಡಿಗೆ ಒಬ್ಬ ಸಹಾಯಕರನ್ನು ಹಾಕಿದ್ದು ಅವರು ಎಲ್ಲರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ಸರಿಯಾಗಿ ಆಕ್ಸಿಜನ್ ಸಿಗುತ್ತಿಲ್ಲ. ಜತೆಗೆ ಚಿಕಿತ್ಸೆ ಊಟದ ವ್ಯವಸ್ಥೆ ಇಲ್ಲದೆ ಸೋಂಕಿಗಿಂತ ಹೆಚ್ಚಾಗಿ ಮೂಲಭೂತ ಸಮಸ್ಯೆಯಿಂದಲೇ ಬಳಲುವಂತಾಗಿದೆ ಎಂದು ಹೇಳುತ್ತಿದ್ದಾರೆ.
ಇನ್ನು ವೈದ್ಯರು ಮತ್ತು ಸೋಂಕಿತರಾದ ನಮ್ಮ ಮಧ್ಯೆ ಯಾವುದೇ ಸಂಬಂಧವೇ ಇಲ್ಲದಂತಾಗಿದೆ. ಸರ್ಕಾರಿ ಆಸ್ಪತ್ರೆ ಗತಿಯೇ ಹೀಗಾದ್ರೆ ಹೇಗೆ ಎಂದು ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ನಮ್ಮ ಕಡೆ ನೋಡಿ ನಮಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.