ಬೆಂಗಳೂರು: ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡುವ ಕುರಿತು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಿಬಿಎಂಪಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೊರಗುತ್ತಿಗೆ ಶಿಕ್ಷಕರು ಈಗಲೂ ತಿಂಗಳಿಗೆ 8 ಸಾವಿರ ರೂ. ಗಳಿಂದ 13 ಸಾವಿರ ರೂ. ಗೌರವಧನ ಪಡೆಯುತ್ತಿದ್ದಾರೆ. ಈ ನಿರ್ಣಯ ಜಾರಿಯಾದರೆ ಅವರಿಗೂ ಕಾಯಂ ಶಿಕ್ಷಕರ ವೇತನದಷ್ಟೇ ಗೌರವಧನ ಸಿಗಲಿದೆ.
ಕೌನ್ಸಿಲ್ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಲೋಕೇಶ್, ಈ ನಿರ್ಣಯ ಕೈಗೊಂಡಿದ್ದಕ್ಕೆ ಧನ್ಯವಾದ. ಈ ಬಗ್ಗೆ ಈಗಲೇ ಸಂತೋಷ ಪಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಟೇಲರಿಂಗ್ ತರಬೇತಿ ಶಿಕ್ಷಕಿಯರಿಗೆ ಸಮಾನ ವೇತನ ಜಾರಿ ಮಾಡಲಾಗಿದೆ. ಅದೇ ರೀತಿ ನಮಗೂ ಶೀಘ್ರ ಜಾರಿಗೊಳಿಸಬೇಕು. ಆಗನಾವೂ ಖುಷಿಪಡಬಹುದು ಎಂದರು.
ಹೊರಗುತ್ತಿಗೆ ತೆಗೆದು, ನೇರ ಗುತ್ತಿಗೆ ಪದ್ಧತಿ ಜಾರಿಗೊಳಿಸಿದರೆ ನಮ್ಮ ನೇಮಕಾತಿಗೆ ಅನುಕೂಲವಾಗುತ್ತದೆ. ಈ ಮಾರ್ಪಾಡನ್ನೂ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮೇಯರ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು ಹಾಗೂ ಪಾಲಿಕೆ ಸದಸ್ಯರನ್ನು ಭೇಟಿಯಾಗಿ ಶಿಕ್ಷಕರು ತಮ್ಮ ಸಂಕಷ್ಟು ಹೇಳಿಕೊಂಡಿದ್ದರು.