ಬೆಂಗಳೂರು: ರಾಜ್ಯದ ರಾಜ ರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳನ್ನು ಬಿಜೆಪಿ ಮಂಗಳವಾರ ಘೋಷಿಸಿದೆ. ಬೆಂಗಳೂರಿನ ರಾಜ ರಾಜೇಶ್ವರಿ ನಗರ ಕ್ಷೇತ್ರದಿಂದ ಅನರ್ಹ ಶಾಸಕ ಮುನಿರತ್ನ ಹಾಗೂ ಶಿರಾ ಕ್ಷೇತ್ರದಿಂದ ಡಾ.ರಾಜೇಶ್ ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಸುಪ್ರೀಂ ಕೋರ್ಟ್ ನಲ್ಲಿ ಮುನಿರತ್ನ ವಿರುದ್ಧದ ಚುನಾವಣೆಯಲ್ಲಿ ಅಕ್ರಮವೆಸಗಿ ಗೆಲುವು ಸಾಧಿಸಿದ ಪ್ರಕರಣ ಸಂಬಂಧ ಅಂದಿನ ಬಿಜೆಪಿ ಅಭ್ಯರ್ಥ್ಯಿ ತುಳಸಿ ಮುನಿರಾಜುಗೌಡ ಸಲ್ಲಿಸಿದ ಅರ್ಜಿ ವಜಾಗೊಂಡ ಬೆನ್ನಲ್ಲೆ ಎರಡು ಕ್ಷೇತ್ರಗ ಳಿಗೆ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿ ಘೋಷಣೆ ಮಾಡಿದೆ.
ಇತ್ತೀಚೆಗೆ ಬಿಜೆಪಿ ಸೇರಿದ್ದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಡಾ. ರಾಜೇಶ್ ಗೌಡ ಅವರಿಗೆ ಶಿರಾದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ದೊರಕಿದೆ. ಹಾಗೆಯೇ ಆರ್ ಆರ್ ನಗರಕ್ಕೆ ಮುನಿರತ್ನಗೆ ಟಿಕೆಟ್ ನೀಡಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ರಾಜರಾಜೇಶ್ವರಿ ಕ್ಷೇತ್ರ ಉಪ ಚುನಾವಣೆಯ ಸಂಬಂಧ ನಾಳೆ ಬೆಳಗ್ಗೆ 11ಗಂಟೆಗೆ ಮುನಿರತ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಂದು ಮಧ್ಯಾಹ್ನ ಹೇಳಿದ್ದರು.
ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ9.30ಕ್ಕೆ ಮುನಿರತ್ನ ಅವರನ್ನು ಪಕ್ಷದ ಕಚೇರಿಗೆ ಬರಲು ಹೇಳಿದ್ದಾರೆ. 11 ಗಂಟೆಗೆ ಮುನಿರತ್ನ ನಾಮಪತ್ರ ಸಲ್ಲಿಸುತ್ತಾರೆ. ಸಿಎಂ ಯಡಿಯೂರಪ್ಪನವರೇ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತಾರೆ. ಅಭ್ಯರ್ಥಿ ವಿಚಾರವಾಗಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ತಾಜ್ ಹೋಟೆಲಿನಲ್ಲಿ ಸಿಎಂ ಬಿಎಸ್‌ವೈ ಆಪ್ತ ಸಚಿವರ ಜತೆ ಮಧ್ಯಾಹ್ನ ಭೋಜನ ಮಾಡಿದರು. ಸಿಎಂಗೆ ಸಚಿವ ಸೋಮಣ್ಣ , ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಮುನಿರತ್ನ, ಎಸ್.ಟಿ.ಸೋಮಶೇಖರ್ ಸಾಥ್ ನೀಡಿದ್ದರು.