ಬೆಂಗಳೂರು: ಇತ್ತೀಚೆಗೆ ಅಶೋಕ್ ಗಸ್ತಿಯವರ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಕೆ. ನಾರಾಯಣ್ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಅವರು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಮತ್ತು ರಾಜ್ಯಸಭಾ ಉಪ ಚುನಾವಣೆಯ ರಿಟರ್ನಿಂಗ್ ಅಧಿಕಾರಿಯಾದ ಎಂ.ಕೆ.ವಿಶಾಲಾಕ್ಷಿ, ನಾರಾಯಣ್ ಅವರು ಬಿ ಫಾರ್ಮ್ ಸಲ್ಲಿಸಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಸುಧಾಕರ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ಬಿ ಫಾರ್ಮ್ ಸಲ್ಲಿಕೆ ಮಾಡಿಲ್ಲ. ಅದು ನಾಮಪತ್ರ ಸಲ್ಲಿಸಲು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನವೆಂಬರ್ 23 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಬೇರೆ ಯಾವುದೇ ಪಕ್ಷಗಳ ನಾಯಕರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ನಾರಾಯಣ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನಾರಾಯಣ್ ಅವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್. ಅಶೋಕ್ ಮತ್ತು ಕೆ.ಎಸ್. ಈಶ್ವರಪ್ಪ ನಾಮಪತ್ರ ಸಲ್ಲಿಸುವ ವೇಳೆ ಜೊತೆಗಿದ್ದರು. ಅವರ ಅಭ್ಯರ್ಥಿತನದ ಆಯ್ಕೆಯನ್ನು ಬಿಜೆಪಿ ಮೊನ್ನೆಯಷ್ಟೇ ಘೋಷಿಸಿತ್ತು. ನಾರಾಯಣ್ ಅವರ ಹೆಸರು ಪ್ರಕಟಿಸಿದ್ದು ಹಲವರಿಗೆ ಅಚ್ಚರಿಯನ್ನುಂಟುಮಾಡಿತ್ತು.
ನಾರಾಯಣ್ ಅವರಿಗೆ ಗೆಲ್ಲಲು 112 ಸ್ಥಾನಗಳು ಬೇಕು, ಅದು ಬಿಜೆಪಿಯಲ್ಲಿ ವಿಧಾನಸಭೆಯಲ್ಲಿ ಇದೆ. ಮೂಲತಃ ಉದ್ಯಮಿಯಾಗಿರುವ ನಾರಾಯಣ್ ಬೆಂಗಳೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ. ಆರ್ ಎಸ್ಎಸ್ ಜತೆಗೆ ಗುರುತಿಸಿಕೊಂಡಿರುವ ಅವರು ನೇಯ್ಗೆ ಸಮುದಾಯದ ಪ್ರತಿನಿಧಿಯಾಗಿದ್ದಾರೆ.