ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಿ, ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಬಳಿಕ ಬಿಜೆಪಿ ಸೇರಿ ಮತ್ತೆ ಶಾಸಕರಾಗಿ ಸಚಿವ ಸ್ಥಾನವನ್ನು ಪಡೆದುಕೊಂಡಿರುವ ಬಿಜೆಪಿಯ ವಲಸೆ ಸಚಿವರು ಆರು ತಿಂಗಳಲ್ಲಿ ಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಗೋಪಾಲಯ್ಯ, ಬಿ.ಸಿ. ಪಾಟೀಲ್, ನಾರಾಯಣಗೌಡ, ಆರ್. ಶಂಕರ್, ಸುಧಾಕರ್ ಇನ್ನು ಆರು ತಿಂಗಳಲ್ಲಿ ತಮ್ಮ ಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇದೆ ಎಂದು ಹೇಳಿದರು. ಆದರೆ ಅದಕ್ಕೆ ಕಾರಣ ಏನು ಎಂದು ಮಾತ್ರ ತಿಳಿಸಿಲ್ಲ.
ಕೆಆರ್ಎಸ್ಗೂ ಕಾದಿದೆ ಗಂಡಾಂತರ
ಶಿವಮೊಗ್ಗ ಸ್ಫೋಟ ವಿಚಾರವಾಗಿ ಮಾತನಾಡಿದ ಅವರು ಇದೇ ರೀತಿಯ ಸ್ಫೋಟ ಕೆ.ಆರ್.ಎಸ್ ಡ್ಯಾಂ ಬಳಿಯೂ ನಡೆಯಲಿದೆ. ಕೃಷ್ಣರಾಜ ಸಾಗರ ಅಣೆಕಟ್ಟೆ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ, ಇಲ್ಲವಾದರೆ ಕೆಆರ್ಎಸ್ಗೆ ಅಪಾಯವಿದೆ ಎಂದು ಎಚ್ಚರಿಸಿದರು.
ಇನ್ನು ಅಕ್ರಮವಾಗಿ ನಡೆಯುವ ಗಣಿಗಾರಿಕೆ ಸಕ್ರಮ ಮಾಡಿಕೊಳ್ಳಿ ಎಂದು ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ನಾನ್ಸೆನ್ಸ್ ನಿಂದ ಕೂಡಿದೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಇದು ಮನೆಗಳ ಅಕ್ರಮ ಸಕ್ರಮ ಯೋಜನೆಯಲ್ಲ ಎಂದು ಟೀಕಿಸಿದರು.