ಬೆಂಗಳೂರು: ಭಾರತ ಬಹುರಾಜ್ಯ ಹಾಗೂ ಬಹುಭಾಷೆಯ ಒಕ್ಕೂಟ ವ್ಯವಸ್ಥೆ. ಇಲ್ಲಿ ಎಲ್ಲರೂ ಸರಿ ಸಮಾನರು ಹೀಗಿದ್ದರೂ ಹಿಂದಿ ಭಾಷೆಯನ್ನು ಮಾತ್ರ ರಾಜ ಭಾಷೆಯಂತೆ ಮೆರೆಸುವ ಕಾರ್ಯವಾದ ಹಿಂದಿ ದಿವಸ್ ಆಚರಣೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಅನೇಕತೆಯಲ್ಲಿ ಏಕತೆ’ ಇರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೆರವಣಿಗೆ ಮಾತ್ರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹಿಂದಿಯನ್ನು ಸಿದ್ಧಾಂತದ ವಿಚಾರವಾಗಿ ಪರಿವರ್ತಿಸಲಾಗಿದೆ. ರಾಷ್ಟ್ರೀಯತೆ, ದೇಶಭಕ್ತಿ, ಹಿಂದುತ್ವದೊಂದಿಗೆ ಹಿಂದಿಯನ್ನು ಸಮೀಕರಿಸಲಾಗಿದೆ. ಇಂಥ ಪ್ರಯತ್ನಗಳಿಗಿಂತಲೂ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ವಿವಿಧ ಭಾಷೆಗಳನ್ನು ಆಡುವ ಭಾರತೀಯರ ದೇಶಭಕ್ತಿಯನ್ನು ಭಾಷೆ ಮೂಲಕ ಅಳೆಯುವುದು ಅಪಚಾರವೇ ಸರಿ. ಇದು ಸಮಗ್ರತೆಗೆ ಎಸೆದ ಸವಾಲು ಎಂದು ಎಚ್ಚರಿಸಿದ್ದಾರೆ.
ಅನ್ಯ ಭಾಷಿಕರಿಗೆ ನಿರರ್ಥಕವಾಗಿರುವ ಹಿಂದಿ ದಿವಸವನ್ನು ಆಚರಿಸುವುದೇ ಆದರೆ, ಹಿಂದಿಯೊಂದಿಗೆ ಅಧಿಕೃತ ಭಾಷೆಗಳೆನಿಸಿರುವ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ದಿನವನ್ನು ಕೇಂದ್ರ ಸರ್ಕಾರವೇ ದೇಶದಾದ್ಯಂತ ಆಚರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ದಿನವನ್ನೂ ಘೋಷಣೆ ಮಾಡಬೇಕು. ನವೆಂಬರ್ 1 ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತ ಬಹು ರಾಜ್ಯ ಹಾಗೂ ಬಹುಭಾಷೆಯ ಒಕ್ಕೂಟ ವ್ಯವಸ್ಥೆ. ಇಲ್ಲಿ ಎಲ್ಲರೂ ಸರಿ ಸಮಾನರು ಹೀಗಿದ್ದರೂ ಹಿಂದಿ ಭಾಷೆಯನ್ನು ಮಾತ್ರ ರಾಜ ಭಾಷೆಯಂತೆ ಮೆರೆಸುವ ಕಾರ್ಯವಾದ ಹಿಂದಿದಿವಸ ಆಚರಣೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.'ಅನೇಕತೆಯಲ್ಲಿ ಏಕತೆ' ಇರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೆರವಣಿಗೆ ಮಾತ್ರ ಮಾಡುವುದು ಸರಿಯಲ್ಲ.#StopHindilmposition
— Nikhil Kumar (@Nikhil_Kumar_k) September 14, 2020