ಚಂಡೀಗಢ: ಕಳಪೆಯಿಂದ ಕೂಡಿರುವ ಸ್ಯಾನಿಟೈಸರ್ ಉತ್ಪಾದನೆಯಲ್ಲಿ ತೊಡಗಿರುವ 11 ಸ್ಯಾನಿಟೈಸರ್ ಕಂಪನಿಗಳ ವಿರುದ್ಧ ಚಂಡೀಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ ತಡೆಯಲು ಪ್ರಸ್ತುತ ಸ್ಯಾನಿಟೈಸರ್ ಬಳಕೆ ಅಗತ್ಯ. ಇಂತಹ ಸ್ಯಾನಿಟೈಸರ್ ಉದ್ಯಮದಲ್ಲೂ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗುಣಮಟ್ಟದ ನಿಯತಾಂಕಗಳು ವಿಫಲವಾದ ಕಾರಣ 11 ಸ್ಯಾನಿಟೈಜರ್ ಬ್ರಾಂಡ್ಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ಎಫ್ಐಆರ್ ಜೊತೆಗೆ ಪರೀಕ್ಷೆಗಳಲ್ಲಿ ವಿಫಲವಾದ ಬ್ರ್ಯಾಂಡ್ಗಳ ಪರವಾನಗಿಯನ್ನು ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಹಲವು ಕಡೆಗಳಲ್ಲಿ ಸ್ಯಾನಿಟೈಸರ್ ಬ್ಯಾಂಡ್ಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಕಳಪೆ ಗುಣಮುಟ್ಟ ಹೊಂದಿದ್ದ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.
ಈವರೆಗೆ ಪರೀಕ್ಷೆಗೆ ಒಳಪಡಿಸಿದ್ದ 248 ಕಂಪನಿಗಳಲ್ಲಿ 109 ಗುಣಮಟ್ಟದಲ್ಲಿ ಪಾಸ್ ಆಗಿವೆ. ಆದರೆ 14 ವಿಫಲವಾಗಿದೆ. ಅವುಗಳಲ್ಲಿ 9 ಬ್ರಾಂಡ್ಗಳು ಗುಣಮಟ್ಟವೇ ಇಲ್ಲದವು ಎಂದು ಕಂಡುಬಂದಿದೆ, ಆದರೆ 5 ಬ್ರಾಂಡ್ಗಳಲ್ಲಿ ಹೆಚ್ಚಿನ ಪ್ರಮಾಣದ ಮೆಥನಾಲ್ ಇದ್ದು ಇದುಕೂಡ ಹಾನಿಕಾರಕವಾಗಿದೆ ಎಂದು ಹೇಳಿದರು.
ಆಹಾರ ಮತ್ತು ಔಷಧ ಆಡಳಿತ ಮಂಡಳಿಯು ರಾಜ್ಯಾದ್ಯಂತ ಸುಮಾರು 248 ಸ್ಯಾನಿಟೈಸರ್ ಕಂಪನಿಗಳ ಮಾದರಿಯನ್ನು ಸಂಗ್ರಹಿಸಿದ್ದು, ಅದರಲ್ಲಿ 123 ಮಾದರಿಗಳ ಪರೀಕ್ಷಾ ವರದಿಗಳು ಬಂದಿವೆ ಎಂದ ಅವರು, ಇನ್ನು ಪರೀಕ್ಷೆಗಳಲ್ಲಿ ವಿಫಲವಾದ ಸ್ಯಾನಿಟೈಜರ್ ಬ್ರಾಂಡ್ಗಳ ಎಲ್ಲಾ ಸ್ಟಾಕ್ ಅನ್ನು ಮಾರುಕಟ್ಟೆಯಿಂದ ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.