ಚಿಕ್ಕಮಗಳೂರು: ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಗಳನ್ನು ಒಂದೇ ಖಾತೆಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಸಿ.ಟಿ.ರವಿ ತಿಳಿಸಿದರು.
ನರಸಿಂಹರಾಜಪುರ ತಾಲೂಕಿನ ದೀಪ್ತಿ ಸರ್ಕಲ್ ಬಳಿ ನಿರ್ಮಿಸಲಾದ ರೂ. 60 ಲಕ್ಷ ರೂ. ವೆಚ್ಚದ ನೂತನ ಕೃಷಿ ಇಲಾಖೆ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸರ್ಕಾರವು ರೈತರಿಗೆ ಸಮಗ್ರ ಕೃಷಿಗೆ ಅನುಕೂಲವಾಗುವಂತೆ ಮಾಡಲು ಕೃಷಿ, ತೋಟಗಾರಿಕೆ, ಮೀನುಗಾರಿಕೆ , ಪಶುಸಂಗೋಪನೆಯ ಈ ನಾಲ್ಕು ಇಲಾಖೆಗಳನ್ನು ಒಂದೇ ಇಲಾಖೆಗೆ ಒಳಪಡಿಸಲು ವರದಿ ನೀಡುವಂತೆ ಉಪ ಸಮಿತಿ ರಚಿಸಲಾಗಿದೆ. ರೈತರು ಒಂದೇ ಬೆಳೆ ಬೆಳೆಯಬಾರದು, ಬೆಲೆ ಏರಿಕೆ ಕಂಡಾಗ ಎಲ್ಲರೂ ಅದೇ ಬೆಳೆ ಬೆಳೆಯುತ್ತಾರೆ. ಪ್ರತಿ ವಿಧದ ಬೆಳೆಗಳನ್ನು ಬೆಳೆದಾಗ ಬೆಲೆ ಕುಸಿತ ಕಂಡಾಗ ಆರ್ಥಿಕವಾಗಿ ನಷ್ಟವಾಗುವುದಿಲ್ಲ. ನಾಲ್ಕು ಇಲಾಖೆಗಳು ಒಟ್ಟಾಗಿ ರೈತರಿಗೆ ಸಮಗ್ರ ಬೆಳೆ ಬೆಳೆಯುವ ಬಗ್ಗೆ ಅರಿವು ಮೂಡಿಸುವ ಮೂಲಕ ಕಳೆದುಕೊಂಡಿರುವ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
ಅತಿವೃಷ್ಠಿ, ಬರಗಾಲ, ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ . ಮಾರುಕಟ್ಟೆ ಆಧಾರಿತ ಬೆಲೆ ನಿಗದಿ ಮಾಡುವುದೇ ಇದಕ್ಕೆ ಪರಿಹಾರವಾಗಲಿದೆ. ಈಗಾಗಲೇ ಸರ್ಕಾರವು 28ಬೆಳೆಗೆ ಬೆಂಬಲ ಬೆಲೆ ನೀಡುತ್ತಿದ್ದು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತ ವಿರೋಧಿ ಅಲ್ಲ ಬದಲಾಗಿ ರೈತ ಸ್ನೇಹಿಯಾಗಲಿದೆ ಇಲ್ಲಿ ಯಾರೂ ಬೇಕಾದರೂ ರೈತರ ಮನೆ ಬಾಗಿಲಿಗೆ ಬಂದು ಬೆಳೆಯನ್ನು ಖರೀದಿ ಮಾಡಬಹುದಾಗಿದೆ ಇದಕ್ಕೆ ಯಾವ ನಿರ್ಬಂಧವಿಲ್ಲ. ದಲ್ಲಾಳಿಗಳಿಂದ ರೈತರನ್ನು ಪಾರು ಮಾಡಲು ಸರ್ಕಾರ ಸಣ್ಣಪ್ರಯತ್ನಮಾಡಿದೆ ಎಂದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್ , ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ. ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಸದಾಶಿವ, ಚಂದ್ರಮ್ಮ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.