ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಪುತ್ರಿಯೊಬ್ಬರಲ್ಲೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮೂಲಗಳಿಂದ ಸೋಮವಾರ ತಿಳಿದುಬಂದಿದೆ.
ಭಾನುವಾರವಷ್ಟೇ ಸಿಎಂ ಅವರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಅವರ ಪುತ್ರಿಯಲ್ಲೂ ಕೊರೊನಾ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಅವರನ್ನೂ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊರೊನಾ ಸೋಂಕು ನಿಯಂತ್ರಣ ಕೆಲಸದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದ್ದ ಬಿಎಸ್‌ವೈ ನಿತ್ಯ ಸಚಿವರು, ಅನೇಕ ಅಧಿಕಾರಿಗಳು, ವೈದ್ಯರು, ಖಾಸಗಿ ಆಸ್ಪತ್ರೆಗಳು ಸೇರಿ ಹಲವು ಪ್ರಮುಖರೊಂದಿಗೆ ಸಭೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ವಾರವೂ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಅದರಂತೆ ನಿನ್ನೆ ಮಾಡಿದ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ವರದಿ ಬಂದಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕಾವೇರಿ ನಿವಾಸದಿಂದಲೇ ಬೆಳಗ್ಗಿನ ಉಪಾಹಾರ, ಊಟ ಉಪಚಾರವನ್ನು ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.