ವಿಜಯಪಥ ಸಮಗ್ರ ಸುದ್ದಿ
ರಾಮನಗರ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಿ. ಪಿ. ಯೋಗೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಆದರೆ, ಅಧಿಕೃತವಾಗಿ ಹೆಸರು ಘೋಷಣೆಯಾಗುವ ಮೊದಲೇ ಬ್ಯಾನರ್ ಹಾಕಿದ್ದು ಅಚ್ಚರಿಗೆ ಕಾರಣವಾಗಿತ್ತು.
ಚನ್ನಪಟ್ಟಣದ ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಬುಧವಾರ ಮಧ್ಯಾಹ್ನ ರಾಜಭವನದಲ್ಲಿ ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಬಗ್ಗೆ ಬೆಳಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧಿಕೃತವಾಗಿ ಸಂಪುಟ ಸೇರುವವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅಭಿಮಾನಿಗಳು ಸ್ವಾಗತ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ.
ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದಾಗ ಸಿ. ಪಿ. ಯೋಗೇಶ್ವರ್ ಮಂತ್ರಿಯಾಗುತ್ತಾರೆ ಎಂದು ಸ್ವಾಗತ ಕೋರಿ ಬ್ಯಾನರ್ ಹಾಕಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರ ಹೆಸರು ಪಟ್ಟಿಯಿಂದ ಹೊರಗುಳಿದಿತ್ತು.
ಆಗ ಸಿ. ಪಿ. ಯೋಗೇಶ್ವರ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಸಚಿವರಾಗುತ್ತಾರೆ ಎಂದು ಬ್ಯಾನರ್ ಕಟ್ಟಿ ನಗೆಪಾಟಲಿಗೆ ಒಳಗಾಗಿದ್ದರು. ಆದರೆ, ಈ ಬಾರಿ ಸ್ವತಃ ಯಡಿಯೂರಪ್ಪ ನೂತನ ಸಚಿವರ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ.
2018ರ ಚುನಾವಣೆಯಲ್ಲಿ ಸೋಲು
ಸಿ. ಪಿ. ಯೋಗೇಶ್ವರ್ 2018ರ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ 66,465 ಮತಗಳನ್ನು ಪಡೆದು ಸೋಲು ಕಂಡಿದ್ದರು. ಎಚ್. ಡಿ. ಕುಮಾರಸ್ವಾಮಿ 87,995 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಚುನಾವಣೆಯಲ್ಲಿ ಸೋತ ಸಿ. ಪಿ. ಯೋಗೇಶ್ವರ್ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಆದ್ದರಿಂದ, ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಈಗ ಸಚಿವ ಸ್ಥಾನವನ್ನು ನೀಡಲಾಗುತ್ತಿದೆ.