ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಮಿಕರಿಂದ ಕೆಲಸ ಮಾಡಿಸಿದ್ದರಿಂದ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ಮಹಿಳಾ ಉದ್ಯೋಗಿ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಹಾಗೂ ಕೊರೊನಾ ಸೋಂಕು ವ್ಯಾಪಿಸುತ್ತಿದ್ದರೂ ನಡೆಯುತ್ತಿರುವ ಗಾರ್ಮೆಂಟ್ಸ್ ಬಂದ್ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭಾನುವಾರ ಪಟ್ಟಣದ ಹೊರವಲಯದ ಚೌಹಳ್ಳಿ ಗ್ರಾಮದ ಬಳಿಯಿರುವ ಶಾಹಿ ಗಾರ್ಮೆಂಟ್ಸ್ ಮುಂಭಾಗ ಜಮಾವಣೆಗೊಂಡಿದ್ದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮತ್ತು ಪದಾಧಿಕಾರಿಗಳು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಕಾರ್ಪೋರೇಟ್ ವಲಯದ ಹಣದಾಸೆಗೆ ಕೊರೊನಾ ಸೋಂಕಿನಿಂದ ಉದ್ಯೋಗಿ ಟಿ.ದೊಡ್ಡಪುರ ಗ್ರಾಮದ ಗೀತಾ ಎಂಬುವರು ಮೃತಪಟ್ಟಿದ್ದು, ಈ ಸಾವಿಗೆ ಗಾರ್ಮೆಂಟ್ಸ್ ಹೊಣೆ ಹೊತ್ತು ಆಕೆಯ ಕುಟುಂಬಕ್ಕೆ ಪರಿಹಾರ ಕೊಟ್ಟು, ಕೂಡಲೇ ಕಾರ್ಖಾನೆಯಲ್ಲಿನ ಕೆಲಸವನ್ನು ಬಂದ್ ಮಾಡುವಂತೆ ಒತ್ತಾಯಿಸಿದರು.
ಸಾಂಕ್ರಾಮಿಕ ರೋಗವೊಂದು ದೇಶದಾದ್ಯಂತ ಹರಡಿ ಮರಣ ಮೃದುಂಗವನ್ನು ಬಾರಿಸುತ್ತಿದ್ದರೂ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿರುವ ಗಾರ್ಮೆಂಟ್ಸ್ ವಿರುದ್ಧ ಪ್ರಕೃತಿ ವಿಕೋಪ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾನಿರತರು ಸ್ಥಳಕ್ಕಾಗಮಿಸಿದ ಗಾರ್ಮೆಂಟ್ಸ್ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರರ ಆದೇಶವಿದ್ದರೂ ಭಾನುವಾರದ ಇಂದು ಕೂಡ ಕೊರೊನಾ ಸೋಂಕಿನ ನಡುವೆ ದುಡಿಯುತ್ತಿರುವ ಉದ್ಯೋಗಿಗಳನ್ನು ಕೂಡಲೇ ಮನೆಗೆ ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಡಿ, ತಕ್ಷಣದಿಂದಲೇ ಗಾರ್ಮೆಂಟ್ಸ್ ಮುಚ್ಚಿಸುವಂತೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷರ ಮುಂದೆ ಪಟ್ಟು ಹಿಡಿದರು.
ಗಾರ್ಮೆಂಟ್ಸ್ ಕಾರ್ಯನಿರ್ವಹಿಸಲು ಆದೇಶವೆಲ್ಲಿದೆ ಎಂದು ಪ್ರತಿಭಟನಾಕಾರರ ಆಕ್ಷೇಪಣೆಗೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ಬಾಗಿಲು ತೆರೆದಿದ್ದೇವೆ. ಲಾಕ್ ಡೌನ್ ಮುಗಿದ ನಂತರ ಉದ್ಯೋಗಿಗಳಿಗೆ ಉದ್ಯೋಗ ನೀಡಬೇಕೆಂದರೆ ಈಗಿನ ಎರಡು ಕಂಟೈನರ್ ಭರ್ತಿ ಮಾಡಿ ಕಳುಹಿಸಲು ನಿಗದಿತ ಉದ್ಯೋಗಿಗಳ ದುಡಿಮೆ ಅನಿವಾರ್ಯವೆಂದು ಸಬೂಬು ಹೇಳಿ, ಮೃತ ಉದ್ಯೋಗಿ ಕುಟುಂಬಕ್ಕೆ ಪರಿಹಾರ ನೀಡುವ ನಿರ್ಧಾರ ಅಧಿಕಾರ ನನಗಿಲ್ಲವೆಂದ ವ್ಯವಸ್ಥಾಪಕ ಅನಿಲ್ ಅವರ ವರ್ತನೆಯನ್ನು ಒಕ್ಕೂಟದ ಸಂಘಟನಾ ಸಂಚಾಲಕರಾದ ಎಸ್.ಆರ್.ಶಶಿಕಾಂತ್, ಕುಕ್ಕೂರು ರಾಜು ಹಾಗೂ ಬನ್ನಹಳ್ಳಿ ಸೋಮಣ್ಣ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಒಕ್ಕೂಟದ ಸಂಘಟನಾ ಸಂಚಾಲಕರಾದ ಕೆಂಪಯ್ಯನಹುಂಡಿ ರಾಜು, ಯರಗನಹಳ್ಳಿ ಸುರೇಶ್, ರಾಜಶೇಖರಮೂರ್ತಿ ಸೋಸಲೆ, ಮುಖಂಡರಾದ ಎಸ್.ನಂಜುಂಡಯ್ಯ, ಸಿದ್ದರಾಜು ಯರಗನಹಳ್ಳಿ, ದೊರೆಸ್ವಾಮಿ ಬನ್ನಹಳ್ಳಿ, ಹ್ಯಾಕನೂರು ರಾಚಪ್ಪ, ಕನ್ನಾಯಕನಹಳ್ಳಿ ಮರಿಸ್ವಾಮಿ, ಮನೋಜ್, ಚಂದ್ರಪ್ಪ, ತೊಟ್ಟವಾಡಿ ಮಹದೇವಯ್ಯ, ಜಯಣ್ಣ, ರಾಚಪ್ಪ ತೊಟ್ಟವಾಡಿ ಹಾಗೂ ಇನ್ನಿತರರು ಭಾಗವಹಿಸಿದ್ದರು.