ವಿಜಯಪಥ ಸಮಗ್ರ ಸುದ್ದಿ
ಕೊಡಗು: ಕೊರೊನಾ ಎರಡನೇ ಅಲೆಯಿಂದಾಗಿ ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕಿ ಅಮ್ಮನ ನೆನಪಿಗಾಗಿ ಇದ್ದ ಮೊಬೈಲ್ ಅನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಈ ಕಥೆ ನಿಜಕ್ಕೂ ಮನಕಲುಕುವಂತಿದೆ.
ಕೋವಿಡ್-19 ಸೋಂಕಿನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡು ದುಃಖದ ಅದೆಷ್ಟೋ ಸನ್ನಿವೇಶಗಳನ್ನು ನಾವು ನಿತ್ಯ ನೋಡುತ್ತಿದ್ದೇವೆ. ಇದರಿಂದ ಸಾವಿರಾರು ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದು, ಭಾರಿ ದುಃಖ ನೋವವನ್ನು ಜನರು ಅನುಭವಿಸುತಿದ್ದಾರೆ.
ಅಂಥ ಸ್ಥಿತಿಗೆ ಒಳಗಾಗಿರುವ 10 ವರ್ಷದ ಈ ಬಾಲಕಿ ಪತ್ರ ಬರೆದು ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದಾಳೆ. ಆಕೆ ಹೇಳಿರುವಂತೆ ಕೊವಿಡ್ ತೀವ್ರವಾಗಿದ್ದ ತಾಯಿ ಆಸ್ಪತ್ರೆಯಿಂದ ಮರಳಿ ಮನೆಗೆ ಬರಲಿಲ್ಲ. ಅಮ್ಮನಂತು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಅಮ್ಮನ ನೆನಪಿನ ಮಧುರ ಕ್ಷಣಗಳನ್ನು ಅಡಗಿಸಿಟ್ಟಿದ ಮೊಬೈಲ್ ನನ್ನ ಪಾಲಿಗೆ ಈಗ ಇಲ್ಲವಾಗಿದ್ದು, ಅದನ್ನು ದಯಮಾಡಿ ಸಿಕ್ಕಿರುವವರು ನಮಗೆ ತಲುಪಿಸಿ ಎಂದು ಪುಟ್ಟ ಬಾಲಕಿ ರೋದಿಸುತ್ತಿದ್ದಾಳೆ.
ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ತನ್ನ ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಪುಟ್ಟಿಯಾಗಿದ್ದು ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಕೂಡ ಕಳೆದು ಹೋಗಿದೆ.
ಹೀಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ತನ್ನ ತಾಯಿಯೊಂದಿಗೆ ಇದ್ದ ಮೊಬೈಲ್ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾಳೆ. ನಮ್ಮ ಮನೆಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ನನಗೆ, ನನ್ನ ತಂದೆ ಮತ್ತು ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಂದೆ ಮತ್ತು ನಾನು ಹೋಂ ಐಸೋಲೇಷನ್ನಲ್ಲಿ ಇದ್ದೆವು. ತಾಯಿಗೆ ಕೊರೊನಾ ತೀವ್ರವಾಗಿದ್ದರಿಂದ ಮೇ 6ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾದೆ ಮೇ 16ರಂದು ಬೆಳಗ್ಗೆ 6 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎಂದು ನೊಂದ ಹೃತಿಕ್ಷ ಅಳಲು ತೋಡಿಕೊಂಡಿದ್ದಾರೆ.
ಈಗಷ್ಟೇ ಅಮ್ಮ ಇನ್ನಿಲ್ಲ ಎನ್ನುವ ನೋವನ್ನು ನುಂಗುತ್ತಿದ್ದೇನೆ. ಆದರೆ ಮನೆಯಲ್ಲಿ ಅಮ್ಮನೊಂದಿಗೆ ಇದ್ದ ಪ್ರತಿ ಕ್ಷಣವು ನೆನಪಿಗೆ ಬರುತ್ತಿದೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಅಮ್ಮನೇ ನನಗೆ ಎಲ್ಲಾ. ಆನ್ಲೈನ್ ಕ್ಲಾಸ್ ಆಗುವಾಗ ಅಮ್ಮ ಸಹಾಯ ಮಾಡುತ್ತಿದ್ದರು. ಮನೆಯಲ್ಲಿ ಅಮ್ಮನೊಂದಿಗೆ ಆಡುತ್ತಿದ್ದ ಆಟಗಳು ನನ್ನನ್ನು ಕಾಡುತ್ತಿವೆ. ಕಳೆದ ಪ್ರತಿಯೊಂದು ಸನ್ನಿವೇಶವು ಅಮ್ಮನ ಕೈಯಲ್ಲಿ ಇದ್ದ ಮೊಬೈಲ್ನಲ್ಲಿದೆ. ಹೀಗಾಗಿ ಆ ಮೊಬೈಲ್ ನನಗೆ ಬೇಕು ಎಂದು ಹೃತಿಕ್ಷ ಮನವಿ ಮಾಡಿದ್ದಾಳೆ.
ನನ್ನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ಕೊರೊನಾ ಕಾಲದಲ್ಲಿ ಓದಲು ಉಪಯೋಗವಾಗಲಿ ಎಂದು ಸ್ಯಾಮ್ಸಂಗ್ ಮೊಬೈಲ್ ಕೊಡಿಸಿದ್ದರು. ಇದರಲ್ಲಿ ನನಗೆ ಆನ್ಲೈನ್ ಕ್ಲಾಸ್ ಕೂಡ ನಡೆಯುತ್ತಿತ್ತು. ತಾಯಿಗೆ ಹುಷಾರಿಲ್ಲದ ಕಾರಣ ಇದು ಅವರ ಬಳಿ ಇತ್ತು. ಅಮ್ಮನ ಅಪ್ಪುಗೆಯಲ್ಲಿ ಇದ್ದ ಫೋಟೊಗಳು ಈ ಮೊಬೈಲ್‌ನಲ್ಲಿ ಇದೆ. ಅಮ್ಮನ ಬಳಿ ಶುಕ್ರವಾರ ಸಂಜೆ (ಮೇ 15) ಮಾತನಾಡಿದ್ದೆ. ಆದರೆ ಶನಿವಾರ ಬೆಳಗ್ಗೆ ರಿಂಗ್ ಆದ ಫೋನ್ ಮಧ್ಯಾಹ್ನ ಸ್ವಿಚ್ ಆಫ್ ಆಗಿದೆ. ಹೀಗಾಗಿ ನನ್ನ ತಾಯಿಯ ಮೊಬೈಲ್ ಹುಡುಕಿ ಕೊಡಿ ಎಂದು 5ನೇ ತರಗತಿ ಓದುತ್ತಿರುವ ಹೃತಿಕ್ಷ ಬೇಡಿಕೊಂಡಿದ್ದಾಳೆ.
ತಾಯಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗೆ ಅವಸರವಿತ್ತು. ಹೀಗಾಗಿ ವಿಷಯ ತಿಳಿದು ನಮ್ಮ ತಂದೆ ಆಸ್ಪತ್ರೆಗೆ ತೆರಳಿದ್ದಾರೆ. ತಾಯಿಯ ಮೃತದೇಹವನ್ನು ಆಸ್ಪತ್ರೆಯವರು ಹಸ್ತಾಂತರಿಸಿದ್ದು, ಆಸ್ಪತ್ರೆಯಲ್ಲಿ ಇದ್ದ ಅಮ್ಮನ ಇನ್ನಿತರ ಸಾಮಗ್ರಿಗಳನ್ನು ಸಿಬ್ಬಂದಿ ತಂದೆ ಕೈಗೆ ಇಟ್ಟಿದ್ದಾರೆ. ಆದರೆ ತಾಯಿ ಜೊತೆಗಿದ್ದ ಮೊಬೈಲ್ ಕಾಣಿಸುತ್ತಿಲ್ಲ. ಆಸ್ಪತ್ರೆಯವರ ಬಳಿ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಆ ಮೊಬೈಲ್‌ನಲ್ಲಿ ನನ್ನ ತಾಯಿಯ ಜೊತೆಗಿದ್ದ ಸಾಕಷ್ಟು ನೆನಪುಗಳಿದೆ. ಹೀಗಾಗಿ ಮೊಬೈಲ್ ಹುಡುಕಿಕೊಡಿ ಪ್ಲೀಸ್ ಎಂದು ಗೋಗರಿಯುತ್ತಿದ್ದಾಳೆ.
ತಾಯಿ ಇಲ್ಲದೆ ನಾನು ತಬ್ಬಲಿಯಾಗಿದ್ದೇನೆ, ಹೀಗಾಗಿ ತಾಯಿ ನೆನಪಿಗಾಗಿ ಇದ್ದ ಮೊಬೈಲ್ ಯಾರಿಗಾದರು ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ ಎಂದು ಹೃತಿಕ್ಷ ಕಣ್ಣೀರು ಇಡುತ್ತಾ ಬೇಡಿಕೊಂಡಿದ್ದಾಳೆ.