ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ : ಕೋವಿಡ್ ಎರಡನೇ ಅಲೆಯಿಂದ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ನಿರಾಣಿ ಪೌಂಡೇಶನ್ ವತಿಯಿಂದ ಜಿಲ್ಲಾಡಳಿತಕ್ಕೆ 2 ಅಂಬುಲೆನ್ಸ್ ಸೇರಿ 4 ಇತರೆ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರ ಮೂಲಕ ರವಿವಾರ ಹಸ್ತಾಂತರಿಸಲಾಯಿತು.
ಬೀಳಗಿ ತಾಲೂಕಾ ಪಂಚಾಯಿತಿ ಆವರಣದಲ್ಲಿ ನಿರಾಣಿ ಫೌಂಡೇಶನದಿಂದ ನೀಡಲಾದ ಅಂಬುಲೆನ್ಸ್ ಹಾಗೂ ಇತರೆ ವಾಹನಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿಕೊಂಡು ಮಾತನಾಡಿದ ಅವರು, ಕೋವಿಡ್ ಸಂಕಷ್ಟದಲ್ಲಿ ಸೊಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಅಂಬುಲೆನ್ಸ್ ಜೊತೆಗೆ ಬೀಳಗಿ ತಾಲೂಕಾ ಕೋವಿಡ್ ಕೇರ್ ಸೆಂಟರ್‍ಗಳಿಗೆ 500 ಡಿಸ್ಪೋಜಲ್ ಬೆಡ್, ಸ್ಯಾನಿಟೈಜರ್ ನೀಡಿದ್ದಾರೆ. ರೋಗಿಗಳಿಗೆ ಆಕ್ಸಿಜನ್ ಮುಖ್ಯವಾಗಿರುವುದನ್ನು ಮನಗಂಡು ಕೋವಿಡ್ ಆಸ್ಪತ್ರೆಗಳಿಗೆ ಉಚಿತವಾಗಿ ಆಕ್ಸಿಜನ್ ಪೂರೈಸಲು ಸಹ ನಿರಾಣಿ ಫೌಂಡೇಶನ್ ಮುಂದಾಗಿರುವುದು ಶ್ಲಾಘನೀಯ ಎಂದರು.
ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಕೋವಿಡ್ ಎರಡನೇ ಅಲೆಯಿಂದ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮಾಡಲು ಎಂ.ಆರ್.ಎನ್(ನಿರಾಣಿ) ಫೌಂಡೇಶನ್ ತಾಲೂಕಾ ಆಡಳಿತದೊಂದಿಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದರು.
ಉಚಿತ ಆಕ್ಸಿಜನ್ ಪೂರೈಕೆ, ತಜ್ಞವೈದ್ಯರಿಂದ ಕನ್ಸಲ್ಟೆನ್ಸಿ, ಉಚಿತ ಟ್ಯಾಕ್ಸಿ ಹಾಗೂ ಅಂಬುಲೆನ್ಸ್ ಸೇವೆ, ದಿನ 24 ಗಂಟೆಗಳ ಕಾಲ ಸಹಾಯವಾಣಿ ಕೇಂದ್ರ ಸ್ಥಾಪನೆ, ಸೋಂಕಿತರಿಗೆ ಉಚಿತ ಊಟದ ವ್ಯವಸ್ಥೆ, 100 ಹಾಸಿಗೆಗಳ ಉಚಿತ ಕೋವಿಡ್ ಕೇರ್ ಸೆಂಟರ್, ಕೋವಿಡ್ ಚಿಕಿತ್ಸೆ, ಸ್ಯಾನಿಟೈಜರ್ ವಿತರಣೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನದ 24 ಗಂಟೆ ಸಹಾಯವಾಣಿ
ಬೀಳಗಿ ತಾಲೂಕಾ ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ನಿರಾಣಿ ಫೌಂಡೇಶನ್ ಸಿಬ್ಬಂದಿಗಳನ್ನೊಳಗೊಂಡ ಸಹಾಯವಾಣಿ ಆಸ್ಪತ್ರೆ, ಕೇರ್ ಸೆಂಟರ್, ಅಂಬುಲೆನ್ಸ್, ಎಮರ್ಜನ್ಸಿ ಟ್ಯಾಕ್ಸಿ ಸೇರಿದಂತೆ ಹಲವು ಸೌಕರ್ಯಗಳನ್ನು ನೀಡಲು ಕೋವಿಡ್‍ಗೆ ಸಂಬಂಧಿಸಿದ ಮಾಹಿತಿ ನೀಡಲು ದಿನ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಬೀಳಗಿ ತಾಲೂಕಾ ಆಸ್ಪತ್ರೆಯ ವೈದ್ಯರಾದ ಡಾ.ಕರೆನ್ನವರ (9448435195), ಡಾ.ವಿಲಾಸ ಕರವತಿಕರ (9164874231), ತಹಸೀಲ್ದಾರ ಶಂಕರ ಗೌಡಿ (9739976829) ಹಾಗೂ ನಿರಾಣಿ ಫೌಂಡೇಶನ್ ಸಂಚಾಲಕ (7483749554) ಇವರನ್ನು ಸಂಪರ್ಕಿಸಬಹುದಾಗಿದೆ.
l ಮುರುಗೇಶ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವ