ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ನಟಿ ಸಂಜನಾ ಗಲ್ರಾನಿ ಅವರನ್ನು ಎರಡು ದಿನ ಸಿಸಿಬಿ ವಶಕ್ಕೆ ಕೋರ್ಟ್ ಒಪ್ಪಿಸಿದೆ.
ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಬ್ಬರು ನಟಿಯರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಬಂಧಿತ ನಟಿ ರಾಗಿಣಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರೆ, ಸಂಜನಾ ಇನ್ನು ಎರಡು ದಿನ ಸಿಸಿಬಿ ವಶದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಸೆಪ್ಟೆಂಬರ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಇದರೊಂದಿಗೆ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ ಸ್ಯಾಂಡಲ್ ವುಡ್ ನ ಮೊದಲ ನಟಿ ಎಂಬ ಕುಖ್ಯಾತಿಗೆ ರಾಗಿಣಿ ಪಾತ್ರರಾಗಿದ್ದಾರೆ.
ರಾಗಿಣಿಯೊಂದಿಗೆ ಡ್ರಗ್ ಪೆಡ್ಲರ್ ಲೂಮ್ ಪೆಪರ್, ರಾಹುಲ್, ನಿಯಾಜ್, ಪ್ರಶಾಂತ್ ರಾಂಕಾ ಜೈಲು ಸೇರಲಿದ್ದಾರೆ. ಇನ್ನು ಸಂಜನಾ ಎರಡುದಿನ ಮತ್ತು ವೀರೇನ್ ಖನ್ನಾ, ರವಿಶಂಕರ್ನನ್ನೂ ಮೂರು ದಿನ ಸಿಸಿಬಿ ವಶಕ್ಕೆ ನೀಡಲಾಗಿದೆ.
ಈ ಮಧ್ಯೆ, ಜಾಮೀನು ಕೋರಿ ನಟಿ ರಾಗಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿಕೆಯಾಗಿದೆ. ಇದೇ ವೇಳೆ ಡ್ರಗ್ ಪೆಡ್ಲರ್ ರಾಹುಲು, ಶಿವಪ್ರಕಾಶ್, ವಿನಯ್ ಕುಮಾರ್, ವೈಭವ್ ಜೈನ್ ಅವರ ಜಾಮೀನು ವಿಚಾರಣೆಯನ್ನೂ ಮುಂದೂಡಲಾಗಿದೆ.