ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಸಿಸಿಬಿ ತನಿಖೆ ಎದುರಿಸಿರುವ ಕಿರು ತೆರೆ ನಿರೂಪಕಿ ಅನುಶ್ರೀ ತಮ್ಮ ಮನದಾಳದ ನೋವನ್ನು ಫೇಸ್ಬುಕ್ ಪೇಜ್ನಲ್ಲಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಕಣ್ಣೀರು ಸುರಿಸುತ್ತ ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 24 ನಾನು ಜೀವನದಲ್ಲಿ ಮರೆಯಲಾಗದ ದಿನ. 12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ ಆಗಿದ್ದು ಅದೇ ಈಗ ಮುಳುವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಎಲ್ಲರೂ ನನ್ನ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಸಿಸಿಬಿ ನೋಟಿಸ್ ಬಂದಾಗ ಬೇಜಾರಾಗಲಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ಆದರೆ ನನ್ನನ್ನು ಆ ರೀತಿ ಬಿಂಬಿಸಲಾಯಿತು ಎಂದು ನೊಂದು ನುಡಿದಿದ್ದಾರೆ.
ಅಂತೆಕಂತೆಗಳ ವಿಚಾರ ಸೃಷ್ಟಿ ಯಾಗುತ್ತಿದೆ. ಇದು ನೆಮ್ಮದಿಯನ್ನು ತುಂಬ ಹಾಳು ಮಾಡುತ್ತಿದೆ. ನಮ್ಮ ಮನಸ್ಥಿತಿ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಜತೆಗೆ ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ. ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ. ಈ ಕಷ್ಟ ಕಾಲದಲ್ಲಿ ಜನರು ಜತೆ ನಿಂತಿದ್ದಾರೆ ಎಂದು ಅನುಶ್ರೀ ಕಣ್ಣೀರಿಡುತ್ತ ಫೇಸ್ಬುಕ್ ವಿಡಿಯೋದಲ್ಲಿ ನೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.