ಬೆಂಗಳೂರು: ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭಾವೇಶ್ ಜೈನ್, ಅರವಿಂದ್ ಜೈನ್ ಮತ್ತು ವಿಮಲ್ ಜೈನ್ ಬಂಧಿತ ಆರೋಪಿಗಳು. ಈ ಮೂವರು ಡೆಲ್ಲಿ ಕ್ಯಾಪಿಟಲ್ ಹಾಗೂ ಸಿಎಸ್ಕೆ ತಂಡಗಳ ನಡುವಿನ ಪಂದ್ಯದ ವೇಳೆ ಗಾಂಧಿನಗರದಲ್ಲಿ ಲಕ್ಷ ಲಕ್ಷ ರೂಪಾಯಿ ಬೆಟ್ಟಿಂಗ್ ನಡೆಸಿದ್ದರು ಎಂದು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತ ಬುಕ್ಕಿಗಳಿಂದ 9.50 ಲಕ್ಷ ರೂ. ನಗದು ಸಹ ವಶಕ್ಕೆ ಪಡೆಯಲಾಗಿದೆ. ಈ ಮೂವರು ಆರೋಪಿಗಳು ಈ ಹಿಂದಿನಿಂದಲೂ ಇದೇ ರೀತಿ ಹಲವು ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸಿರುವ ಶಂಕೆ ಯನ್ನು ಸಿಸಿಬಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.