CrimeNEWSನಮ್ಮರಾಜ್ಯರಾಜಕೀಯ

ಡಿಜೆ ಹಳ್ಳಿ ಗಲಭೆ: ಕೈ-ಕಮಲ ರಾಜಕೀಯ ದುರುದ್ದೇಶಕ್ಕೆ ಬಳಕೆ ಎಂದು ಕಿಡಿ ಕಾರಿದ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಡಿಜೆ ಹಳ್ಳಿ ಗಲಭೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವ  ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳ ನಡೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ.

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಅವರು ಎರಡೂ ಪಕ್ಷಗಳೂ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಎರಡೂ ಪಕ್ಷದ ನಾಯಕರಿಗೆ ಕೆಲ ಪ್ರಶ್ನೆಗಳನ್ನು ಮಾಡಿದ್ದು ಉತ್ತರವನ್ನು ನಿರೀಕ್ಷಿಸಿದ್ದಾರೆ.

ಬಿಜೆಪಿ ನಾಯಕರೆ ಬೆಂಕಿ ಬಿದ್ದ ಮನೆಯಲ್ಲೂ ರಾಜಕಾರಣನಾ?
ಡಿಜೆ ಹಳ್ಳಿ ಘಟನೆಯಲ್ಲಿ ಕಾಂಗ್ರೆಸ್ಸಿಗರೇ ದುಷ್ಕೃತ್ಯ ನಡೆಸಿದ್ದಾರೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿಯ ವಾಚಾಳಿ, ಬಾಯಿಬಡುಕ ಮಂತ್ರಿ, ಶಾಸಕರು ತಮ್ಮ ಬಳಿ ಇರುವ ಕಾಂಗ್ರೆಸ್‌ ವಿರುದ್ಧದ ಸಾಕ್ಷಿಯನ್ನು ತನಿಖಾಧಿಕಾರಿಗಳಿಗೆ ಕೊಡಬಾರದು ಏಕೆ?

ಹೇಗಿದ್ದರು ಸರ್ಕಾರವೇ ಬಿಜೆಪಿಯದ್ದಾಗಿದೆ. ಸೂಕ್ತ ತನಿಖೆ ನಡೆಸಿ ಕಾಂಗ್ರೆಸ್‌ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ? ಸಾಕ್ಷ್ಯವಿಲ್ಲವಾದರೆ ಬಿಜೆಪಿಯದ್ದೂ ಕೇವಲ ರಾಜಕೀಯ ಧ್ರುವೀಕರಣ ಉದ್ದೇಶದ ಬಡಾಯಿತನವೇ?

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಇದರ ಹೊಣೆ ಹೊರಬೇಕಾದ ಬಿಜೆಪಿ ಸರ್ಕಾರ ಅಕ್ಷರಶಃ ಹೊಣೆಗೇಡಿಯಾಗಿದೆ.  ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಇದರಲ್ಲಿ ರಾಜಕೀಯ ಧ್ರುವೀಕರಣದ ಸಂಚು ನಡೆಸುತ್ತಿದೆ. ನಾಚಿಕೆಯಾಗದೇ ಬಿಜೆಪಿಗೆ?

ದೊಡ್ಡ ಅಂತರದ ಮತಗಳಿಂದ ಗೆದ್ದ ಶಾಸಕನೊಬ್ಬನ ಮನೆಗೇ ರಕ್ಷಣೆ ಹಾಗೂ ಪೊಲೀಸ್ ಠಾಣೆಗೆ ರಕ್ಷಣೆ ನೀಡಲಾರದಷ್ಟು ದುರ್ಬಲವಾಗಿರುವ, ಶಕ್ತಿಹೀನ ಸರ್ಕಾರ ಸಾಮಾನ್ಯರಲ್ಲಿ ಸಾಮಾನ್ಯರ ಹಿತ ಕಾಯಲು ಶಕ್ತವಾಗಿದೆಯೇ? ಹಾಗಿಲ್ಲ ಎಂದಮೇಲೆ ಸರ್ಕಾರ ಇದ್ದು ಪ್ರಯೋಜನವೇನು? ಇಲ್ಲವೇ, ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಇಂಥದ್ದೊಂದು ಗಲಭೆ ಬೇಕಾಗಿತ್ತೇ?

ಕೋಮು ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೂಕು ನುಗ್ಗಲಿನಲ್ಲೂ ಮುಂದೆ ಬರುವ ಬಿಜೆಪಿಗೆ ನೈತಿಕ ರಾಜಕಾರಣದ ಅರ್ಥವೇನಾದರೂ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕಾದ್ದು ಯಾವಾಗ ಎಂದು ಕಾಂಗ್ರೆಸ್‌ ನಾಯಕರು ಉತ್ತರಿಸುವರೇ?
ಡಿಜೆ ಹಳ್ಳಿ ಗಲಭೆ ಪ್ರಕರಣ ಮತ್ತು ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ರಕ್ಷಕನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಅನ್ಯ ಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್‌, ಪೌರತ್ವ ತಿದ್ದುಪಡಿ ಕಾಯ್ದೆಯಂಥ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ?  ಕ್ರೈಂ ಸಂಭವಿಸಿದಾಗ ಮಾತ್ರವೇ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ರಕ್ಷಣೆ ಕಾಣಿಸುತ್ತದೆಯೇ?

ಗಲಭೆಯಲ್ಲಿ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ಕಾಂಗ್ರೆಸ್‌ ಸಲಹೆಯೊಂದನ್ನು ನೀಡಿದೆ. ‘ಇನ್ನೊಂದು ಕಡೆಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು. ಹಾಗಾದರೆ, ಆ ಇನ್ನೊಂದು ಕಡೆಯವರು ಯಾರು ಎಂದು ಕಾಂಗ್ರೆಸ್‌ ಧೈರ್ಯದಿಂದ ಹೇಳಬಹುದೇ?

ಎಸ್‌ಡಿಪಿಐ ಅನ್ನು ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್‌ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ? ಇದರ ವಿವರಣೆ ನೀಡಬಹುದೇ?

ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ಥಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪವಾದರೂ ಅಳುಕಿದೆಯೇ?

ಅಧಿಕಾರ ಪಡೆಯುವುದು ಎಲ್ಲ ರಾಜಕೀಯ ಪಕ್ಷಗಳ ಪರಮ ಗುರಿ ಹೌದು. ಆದರೆ, ಅದರಲ್ಲಿ ಸಾಮಾಜಿಕ ಜವಾಬ್ದಾರಿಗಳಿರಬೇಕು, ಉತ್ತರದಾಯಿತ್ವವಿರಬೇಕು, ಪ್ರಾಮಾಣಿಕತೆ ಇರಬೇಕು. ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿದ ವಿಚಾರವೊಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಇದ್ಯಾವುದೂ ಇಲ್ಲ. ಇನ್ನಾದರೂ ಸಣ್ಣತನದ ರಾಜಕೀಯ ಬಿಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

1 Comment

  • Eradu national party kuda bele beyisikollale nintiruvudu adakke helodu pradeshika pakshavannu balista golisi antha olledagli

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?