ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಯೋಜಿತ ರೀತಿಯಲ್ಲಿ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪಮಾಡಿದ್ದಾರೆ.
ದಿನಕ್ಕೊಬ್ಬ ಸಚಿವರು, ಶಾಸಕರು ಭೇಟಿ ನೀಡಿ, ಗಲಭೆಗೆ ಎಸ್ ಡಿಪಿಐ, ಕಾಂಗ್ರೆಸ್, ಭಯೋತ್ಪಾದಕರು ಕಾರಣ ಎಂದು ನೀಡುತ್ತಿರುವ ತರಹೇವಾರಿ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲಭೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಿಂತ ಹೆಚ್ಚು ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವುದು ಹೇಗೆ? ಇದನ್ನು ಕೋಮುಗಲಭೆ ಎಂದು ಬಣ್ಣಿಸಿ ರಾಜಕೀಯ ಲಾಭ ಗಳಿಸುವುದು ಹೇಗೆ? ಎನ್ನುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಬಿಎಸ್‌ವೈ ಅವರ ಪದಚ್ಯುತಿಗೆ ಕೆಲವು ಆರ್‌ಎಸ್ಎಸ್ ಸಮೀಪವರ್ತಿ ನಾಯಕರು ನಡೆಸುತ್ತಿರುವ ಪ್ರಯತ್ನಕ್ಕೆ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣವನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಮತ್ತು ನಮ್ಮ ಪಕ್ಷದ ಕಾರ್ಪೋರೇಟರ್‌ಗಳು ಇರುವಾಗ ಕಾವಲ್‌ಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು? ಅಲ್ಲಿ ಚುನಾವಣೆಯಲ್ಲಿ ಎದುರಿಸಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟ ಎಂದಿದ್ದಾರೆ.
ಕಾವಲ್ ಭೈರಸಂದ್ರ ಗಲಭೆಯ ನಿಜವಾದ ತನಿಖೆ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಶುರುವಾಗಬೇಕು. ಸರ್ಕಾರದ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದರೆ ಅದು ಯಾಕೆ ಪೊಲೀಸರ ಗಮನಕ್ಕೆ ಬಂದಿಲ್ಲ? ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬಕ್ಕೆ ಯಾರು ಕಾರಣ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್‌ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಿ, ಆ ಸಂಘಟನೆ ತಪ್ಪು ಮಾಡಿದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಿ. ಮುಸ್ಲಿಮ್ ಮತಗಳನ್ನು ಒಡೆಯಲು ಎಸ್‌ಡಿಪಿಐ ಅನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುತ್ತಾ ಬಂದಿರುವ ಬಿಜೆಪಿಗೆ ಅದನ್ನು ನಿಷೇಧಿಸುವ ಧೈರ್ಯ ಇದೆಯೇ ಎಂದು ಸವಾಲು ಹಾಕಿದ್ದಾರೆ.
.@BJP4Karnataka ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ. @BSYBJP ಅವರ ಪದಚ್ಯುತಿಗೆ ಕೆಲವು ಆರ್ ಎಸ್ ಎಸ್ ಸಮೀಪವರ್ತಿ ನಾಯಕರು ನಡೆಸುತ್ತಿರುವ ಪ್ರಯತ್ನಕ್ಕೆ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣವನ್ನು ಯಥೇಚ್ಚವಾಗಿ ಬಳಸಲಾಗುತ್ತಿದೆ.
3/6#bangloreviolence— Siddaramaiah (@siddaramaiah) August 18, 2020