ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ. ಈ ಮೂಲಕ ಮಾಜಿ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ಅವರಿಗೆ ಮತ್ತೂಮ್ಮೆ ತನಿಖೆಯ ಉರುಳು ಸುತ್ತಿಕೊಂಡಿದೆ.
2016ರ ಜು.17ರಂದು ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಆತ್ಮಹತ್ಯೆಗೆ ಕಾರಣವೆಂದು ಹಲವರ ಮೇಲೆ ಮಾಡಿದ್ದ ಆರೋಪಗಳಲ್ಲಿ ಹುರುಳಿಲ್ಲ ಎಂದು ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ನ್ನು ನ್ಯಾಯಾಲಯ ತಿರಸ್ಕರಿಸಿ, ಮರು ತನಿಖೆಗೆ ಆದೇಶಿಸಿದೆ.
2016ರಿಂದ 2018 ರವರೆಗೂ ಭಾರಿ ಸಂಚಲನ ಸೃಷ್ಟಿಸಿ ರಾಜಕೀಯ ತಿರುವು ಪಡೆದುಕೊಂಡಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ ಪ್ರಸಾದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿತ್ತು. ಪ್ರಕರಣದ ತನಿಖೆಯನ್ನು ಆಗಿನ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ನಾಲ್ಕು ವರ್ಷಗಳ ಕಾಲ ತನಿಖೆ ನಡೆಸಿದ್ದ ಸಿಬಿಐ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ‘ಬಿ’ ರಿಪೋರ್ಟ್ ಸಲ್ಲಿಸಿತ್ತು.
ಪ್ರಕರಣದ ತನಿಖೆ ನಡೆಸಿ ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಪ್ರಶ್ನಿಸಿ ಮೃತ ಡಿವೈಎಸ್ಪಿ ಗಣಪತಿ ತಂದೆ ಕುಶಾಲಪ್ಪ ಮತ್ತು ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ‘ಬಿ’ ರಿಪೋರ್ಟ್ ರದ್ದುಪಡಿಸಿ, ಪ್ರಕರಣದ ಮರು ತನಿಖೆಗೆ ಸೂಚಿಸಿದ್ದಾರೆ.
ಮಡಿಕೇರಿಯ ಡಿವೈಎಸ್ಪಿ ಆಗಿದ್ದ ಗಣಪತಿ 2016ರ ಜು. 17ರಂದು ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಟಿ.ವಿ. ಸಂದರ್ಶನದಲ್ಲಿ ತನ್ನ ಸಾವಿಗೆ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ಕಾರಣ ಎಂದು ಆರೋಪಿಸಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದು ಜಾರ್ಜ್ ಸಚಿವ ಸ್ಥಾನ ಕಳೆದುಕೊಂಡಿದ್ದರು.
ನಂತರ ನಡೆದ ತನಿಖೆಯಲ್ಲಿ ಈ ಮೂವರ ಪಾತ್ರ ಏನು ಇಲ್ಲ ಎಂದು ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಅದನ್ನು ಒಪ್ಪದ ನ್ಯಾಯಾಲಯ ಮತ್ತೆ ತನಿಖೆಗೆ ಆದೇಶ ನೀಡಿದೆ.
ಅಲ್ಲದೇ ಈ ಸಂಬಂಧ ಕೆ.ಜೆ. ಜಾರ್ಜ್, ಪ್ರಣವ್ ಮೊಹಾಂತಿ, ಎ.ಎಂ. ಪ್ರಸಾದ್ ಅವರಿಗೆ ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯವು, ಸೆ. 28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅರ್ಜಿದಾರರ ಪರ ವಕೀಲ ಪವನ್‌ಚಂದ್ರ ಶೆಟ್ಟಿ ವಾದ ಮಂಡಿಸಿದರು.
Super