ಮೈಸೂರು: ನಂಜನಗೂಡು ತಾಲೂಕು ವೈದ್ಯಾಧಿಕಾರಿ ನಾಗೇಂದ್ರ ಅವರ ಆತ್ಮಹತ್ಯೆಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕಾರಣರಾಗಿದ್ದು ಅವರನ್ನುಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.
ಈಗಾಗಲೇ ಸರ್ಕಾರ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದೆ. ಆದರೆ ಪ್ರತಿಭಟನಾ ನಿರತ ವೈದ್ಯರು ವರ್ಗಾವಣೆ ಮಾಡಿದರೆ ಸಾಲದು ಅವರನ್ನು ಅಮಾನತು ಮಾಡಬೇಕು. ಈ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಆದರೆ ಇದಕ್ಕೆ ವೈದ್ಯರ ಸಂಘ ತೃಪ್ತಿಯಾಗಿಲ್ಲ, ಮಿಶ್ರಾ ಅವರನ್ನು ಅಮಾನತುಗೊಳಿಸಲೇ ಬೇಕು ಎಂದು ಪಟ್ಟುಹಿಡಿದಿದೆ.
ಇನ್ನು ವೈದ್ಯರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ವೈದ್ಯರು ಬೆಂಬಲ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣದ ವಿವರಗಳನ್ನು ಸಂಗ್ರಹಿಸುವ, ಅಪ್‌ಲೋಡ್ ಮಾಡುವ ಮತ್ತು ನವೀಕರಿಸುವ ಕೋವಿಡ್ ಯುದ್ಧ ಕೊಠಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ವೈದ್ಯರು ಮರಳಿ ಕೆಲಸಕ್ಕೆ ಹಾಜರಾಗಿ ಎಂದು ಸಚಿವ ಎಸ್.ಟಿ ಸೋಮಶೇಖರ್ ವಿನಂತಿಸಿಕೊಂಡಿದ್ದಾರೆ. ಆದರೆ ಮಿಶ್ರಾ ಅವರನ್ನು ಅಮಾನತುಗೊಳಿಸದಿದ್ದರೇ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.