ಬೆಂಗಳೂರು: ಕೊರೊನಾ ಸೋಂಕು ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಯ ಮೇಲೆ ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು ಎಂದು ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ವಲಯಗಳು ನಷ್ಟದ ಸುಳಿಗೆ ಸಿಲುಕಿವೆ. ಜನತೆ ಉದ್ಯೋಗ, ವೇತನ ಇಲ್ಲದೆ ಕಂಗಾಲಾಗಿದ್ದಾರೆ. ಇಂಧ ಸಮಯದಲ್ಲಿ ಜನಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೇರುಯವುದು ತರವಲ್ಲ. ಹಾಗಾಗಿ ವಿದ್ಯುತ್ ದರ ಏರಿಕೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 50 ಪೈಸೆ ವರೆಗೆ, ಸರಾಸರಿ 40 ಪೈಸೆ ಹೆಚ್ಚಳ ಮಾಡಿರುವುದು ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಒಂದು ವರ್ಷ ಕಾಲ ದರ ಏರಿಕೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಜನರಿಗಾಗಿ ಬೀದಿಗಿಳಿದು ಹೋರಾಡಲು ಸಿದ್ಧ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.