ಹಾವೇರಿ: ಹಾವೇರಿಯಲ್ಲಿ ಕಾರು ಮತ್ತು ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೂರು ವರ್ಷದ ಮಗು ಮೃತಪಟ್ಟಿದೆ. ಇದರೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ. ಗಾಯಗೊಂಡ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತಳಂಗರೆ ನುಸ್ರತ್ ನಗರದ ಝಯಾರ್ – ಇಶಾನ್ ದಂಪತಿ ಪುತ್ರ ಮುಹಮ್ಮದ್(3) ಮೃತಪಟ್ಟ ಮಗು. ಮಂಗಳವಾರ ಸಂಭವಿಸಿದ ಈ ಅಪಘಾತದಲ್ಲಿ ಝಯಾರ್ ಅವರ ತಂದೆ ಮಹಮ್ಮದ್(65), ತಾಯಿ ಆಯಿಷಾ(62) ಮೃತಪಟ್ಟಿದ್ದರು. ಝಯಾರ್ ಮತ್ತು ಇಶಾನ್ ಹಾವೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಮ್ಮದ್ ಮತ್ತು ಆಯಿಷಾ ಅವರ ಮೃತದೇಹಗಳನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಸಂಜೆ ವೇಳೆಗೆ ಊರಿಗೆ ತರಲಾಗುವುದು. ಮೂರು ವರ್ಷದ ಮಗು ಮಹಮ್ಮದ್ ನ ಮೃತದೇಹ ಖಾಸಗಿ ಆಸ್ಪತ್ರೆಯ ಶವಾಗಾರ ದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಊರಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿನ್ನೆ ಕಾರು ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಕಾರಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದು, ಇವರು ಕಾಸರಗೋಡಿನಿಂದ ಹುಬ್ಬಳ್ಳಿಗೆ ತೆರಳಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.