ಬನ್ನೂರು: ಹೋಬಳಿಯ ಬೀಡನಹಳ್ಳಿಯ ಶ್ರೀ ನಂದಿ ಬಸವೇಶ್ವರ ಸ್ವಾಮಿಯ 9ನೇ ಕೊಂಡ ಮಹೋತ್ಸವ ಸೋಮವಾರ ಮುಂಜಾನೆ 6ರಿಂದ 6. 45ರವರೆಗೆ ವಿಜೃಂಭಣೆಯಿಂದ ನೆರವೇರಿತು.
ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲಿ ಕೊಂಡವನ್ನು ಕಾಶಿವೇಷಧಾರಿ ಮಹದೇವಸ್ವಾಮಿ ಅವರು ಗಜಗಾಂಭೀರ್ಯದಿಂದ ಹಾಯ್ದರು. ಇವರ ನಂತರ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೆಗೌಡ ಮತ್ತು ರಾಜೇಶ್ ಅವರು ಕೊಂಡ ಹಾಯ್ದರು.
ಕೊಂಡ ಹಾಯುವುದಕ್ಕೂ ಮುನ್ನಾ ಮುಂಜಾನೆ ಶ್ರೀಸ್ವಾಮಿಯ ಸನ್ನಿಧಿಯಿಂದ ಬಸವನ ಜತೆಗೆ ಗ್ರಾಮದೇವತೆ ಮಾರಮ್ಮನವರ ಮತ್ತು ಮುತ್ತತ್ತಿರಾಯನ ಪೂಜೆಯನ್ನು ರಾಜ ಬೀದಿಯ ಮೆರವಣಿಗೆ ಮೂಲಕ ಗುರುಸ್ವಾಮಿ ಅವರ ಮನೆಗೆ ಕರೆತರಲಾಯಿತು.
ಗುರುಸ್ವಾಮಿ ಅವರ ಮನೆಯಲ್ಲಿ ಪೂಜೆಗೆ ಹೂ ಹೊಂಬಾಳೆ ಮಾಡಿದ ನಂತರ ಅಲ್ಲಿಂದಲ್ಲೇ ಶ್ರೀಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದ ಭಕ್ತರ ಬಾಯಿಬೀಗ ಚುಚ್ಚಲಾಯಿತು. ಈ ವೇಳೆ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಮೆರವಣಿಗೆ ಮೂಲಕ ಶ್ರೀಸ್ವಾಮಿಯ ಆವರಣದಲ್ಲಿ ತೆರೆಯಲಾಗಿದ್ದ ಕೊಂಡದ ವರೆಗೂ ವಿಜೃಂಭಣೆಯಿಂದ ಮೆರವಣಿಗೆ ಮಾಡಿಕೊಂಡು ಬರಲಾಯಿತು.
ಬಾಯಿಬೀಗ ಹರಕೆ ಹೊತ್ತಿದ್ದ ಭಕ್ತರು ಪಂಜಿನ ಸೇವೆಯನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಾಡಿಕೊಂಡು ಬಂದರು.
ಕೊಂಡದ ಬಳಿ ಬರುತ್ತಿದ್ದಂತೆ ಕೊಂಗ ಬೀಸಿ ಕೆಂಡದ ಮೇಲೆ ಇದ್ದ ಬೂದಿಯನ್ನು ತೆಗೆಯಲಾಯಿತು. ಬಳಿಕ ಕಾಶಿಯ ವೇಷಧಾರಿ ಮಹದೇವಸ್ವಾಮಿ, ಅವರ ಹಿಂದೆ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೆಗೌಡ ಮತ್ತು ರಾಜೇಶ್ ಅವರು ಕೊಂಡ ಹಾಯ್ದರು.
ಕೊಂಡ ಹಾಯುವುದನ್ನು ಪ್ರತಿಯೊಬ್ಬರು ನೋಡಲೆಂದು ಬೆಳ್ಳಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ನೋಡಿದರು.
ಭಾನುವಾರ ಬಂಡಿಯುತ್ಸವ ನಡೆಯಿತು. ಇಂದು ಕೊಂಡೋತ್ಸವ ನೆರವೇರುವ ಮೂಲಕ ಬಂಡಿಕೊಂಡೋತ್ಸವ ಪೂರ್ಣಗೊಂಡಿತು.