ವಿಜಯಪಥ ಸಮಗ್ರ ಸುದ್ದಿ
ನಂಜನಗೂಡು: ದೇಶಿ ಹಾಗೂ ವಿದೇಶಿ ಹಕ್ಕಿಗಳನ್ನು ಆಕರ್ಷಿಸುವ ನಂಜನಗೂಡು ತಾಲೂಕು ಹದಿನಾರು ಗ್ರಾಮದ ಕೆರೆ ಸ್ವಚ್ಛತೆಗೆ ರೋಟರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆಯು ಮುಂದಾಗಿದ್ದು, ಮಾ.25ರಂದು ಕಾರ್ಯಕ್ರಮ ನಿಗದಿ ಮಾಡಿದೆ ಎಂದು ರೋಟರಿ ಮೈಸೂರ್ ಸೌತ್ ಈಸ್ಟ್‌ನ ಅಧ್ಯಕ್ಷ ರೋ. ರಾಜೀವ್ ತಿಳಿಸಿದ್ದಾರೆ.
ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆ ಹಾಗೂ ಅದರ ಅಂಗಸಂಸ್ಥೆ ಗಳಾದ ಇನ್ನರ್ ವ್ಹೀಲ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಹಾಗೂ ಇಂಟರಾಕ್ಟ್ ಕ್ಲಬ್ ಇವರು ಹದಿನಾರು ಗ್ರಾಮ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಪ್ರೌಢ ಶಾಲೆ ಹದಿನಾರು ಇವರೆಲ್ಲರ ಸಹಯೋಗದಲ್ಲಿ ಹದಿನಾರು ಕೆರೆಯ ಸುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹದಿನಾರು ಗ್ರಾಮದ ರೋಟರಿ ಸಮುದಾಯ ದಳ(ಆರ್‌ಸಿಸಿ) ಸದಸ್ಯರೂ ಭಾಗವಹಿಸಲಿದ್ದಾರೆ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಹಾಗೂ ರೋಟರಿ ಸದಸ್ಯೆ ಶುಭಾ ಮುರಳೀಧರ್ ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದ ಜತೆಗೇ “ಹದಿನಾರು ಕೆರೆ”ಯಲ್ಲಿ ಪ್ರತಿವರ್ಷವೂ ಬರುವ ವಲಸೆ ಹಕ್ಕಿಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಮೈಸೂರಿನ ಪಕ್ಷಿ ತಜ್ಞ ಡಾ. ಅಭಿಜಿತ್ ಎಪಿಸಿ ನೀಡಲಿದ್ದಾರೆ. ಗ್ರಾಮದ ಸಮುದಾಯ ಕೇಂದ್ರದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.
ತಹಸೀಲ್ದಾರ್ ಭೇಟಿ: ಹದಿನಾರು ಕೆರೆ ಪಕ್ಷಿ ವೀಕ್ಷಣೆಯ ತಾಣವಾಗಿ ರೂಪುಗೊಳಿಸಲು ಹದಿನಾರಿನ ‘”ನೇಚರ್ ಕ್ಲಬ್” ತಂಡ ಉತ್ಸುಕವಾಗಿದ್ದು, ಈ ಬಗ್ಗೆ ತಮ್ಮ ಅನಿಸಿಕೆಯನ್ನು ತಂಡದವರಾದ ಡಾ. ರವೀಂದ್ರ ಅವರು ನಂಜನಗೂಡು ತಹಸೀಲ್ದಾರ್ ಮೋಹನ ಕುಮಾರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದರು.
ಕೆರೆಯನ್ನು ವೀಕ್ಷಿಸಿದ ತಹಸೀಲ್ದಾರ್ ಮೋಹನ ಕುಮಾರಿ ಈ ಕಾಯಕ್ರಮದಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ಸೇರಿ ಸ್ವಚ್ಛತೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.