ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಸ್ವಚ್ಛ ಸರ್ವೇಕ್ಷಣಾ ಅಭಿಯಾನ-2021 ಅಂಗವಾಗಿ ಬನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ಸಾರ್ವಜನಿಕರು ಸ್ವಚ್ಛತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪಟ್ಟಣವನ್ನು ಸ್ವಚ್ಛ ಮತು ಸುಂದರವನ್ನಾಗಿಸಲು ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಹಾಗೂ ಕಸ ಮುಕ್ತ ಪಟ್ಟಣವನ್ನಾಗಿಸಲು ಪ್ಲಾಸ್ಟಿಕ್ ಬಳಕೆ ಬಿಡಬೇಕು. ಮನೆಯಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ವೈಜ್ಞಾನಿಕ ವಿಲೇವಾರಿಗೆ ಸಹಕರಿಸಬೇಕು. ವಾರ್ಡ್ಗಳಲ್ಲಿ ಖಾಲಿ ಇರುವ ನಿವೇಶನಗಳ ಮಾಲೀಕರು ನಿವೇಶನಗಳಲ್ಲಿ ಗಿಡಗಂಟಿಗಳಿಲ್ಲದಂತೆ ಸ್ವಚ್ಛಗೊಳಿಸಿ ನಿವೇಶನಕ್ಕೆ ಬೇಲಿ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪುರಸಭೆ ಅನುಮತಿಯಿಲ್ಲದೆ ಕಂಡಕಂಡಲ್ಲಿ ಭಿತ್ತಿ ಪತ್ರ, ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ಹಾಕಿ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ತರಬಾರದು. ಸಾರ್ವಜನಿಕರು ಯಾವುದೇ ಉದ್ದೇಶಕ್ಕಾಗಿ ರಸ್ತೆ ಅಗೆಯುವ ಮುಂಚೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ನಿಗದಿಪಡಿಸಿದ ಸ್ಥಳ ಹೊರತುಪಡಿಸಿ ಬೇರೆ ಕಡೆ ಮಲಮೂತ್ರ ವಿಸರ್ಜನೆ ಮಾಡಬಾರದು. ವಾಣಿಜ್ಯ ಮಳಿಗೆ ಮತ್ತು ಅಂಗಡಿಗಳ ಮಾಲೀಕರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು.
ಬಾವಿ ಹಾಗೂ ಕೊಳವೆ ಬಾವಿಗಳು ತೆರೆದ ಸ್ಥಿತಿಯಲ್ಲಿ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಆರೋಗ್ಯ ನಿರೀಕ್ಷಕರ ಗಮನಕ್ಕೆ ತಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಲ್ಲಿಯ ನೀರು ಮಿತವಾಗಿ ಬಳಸಬೇಕು ಮತ್ತು ಪೋಲಾಗದಂತೆ ಅಮೂಲ್ಯ ಜಲ ಸಂಪತ್ತನ್ನು ಸಂರಕ್ಷಿಸಬೇಕು. ಮನೆಯಿಂದ ನೀರು ರಸ್ತೆಯ ಮೇಲೆ ಹರಿಯದಂತೆ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.
ಅಭಿಯಾನದಲ್ಲಿ ಪುರಸಭೆಯೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಈ ಸ್ವಚ್ಛತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿರುವ ಅವರು ಈ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕಾನೂನು ಪ್ರಕಾರ ದಂಡ ಹಾಗೂ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತ ಸರ್ಕಾರದ ಸ್ವಚ್ಚ ಸರ್ವೇಕ್ಷಣವು ಬನ್ನೂರು ಪುರಸಭೆಯು ಸೇರಿದಂತೆ ದೇಶಾದ್ಯಂತ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿಯೂ ನಿವಾಸಿಗಳ ಪ್ರತಿಕ್ರಿಯೆ ಗಳ ಮುಖಂತರ ರ್ಯಾಂಕ್ ಗಳನ್ನ ನೀಡಲಿದ್ದು, ತಾವೂ ಕೂಡ https://www.swachhsurvekshan2021.org/CitizenFeedback%2c ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮುಖಂತರ ಬನ್ನೂರು ಪುರಸಭೆಯನ್ನು ಆಯ್ಕೆ ಮಾಡಿ ತಮ್ಮ ಉತ್ತಮ ಪ್ರತಿಕ್ರಿಯೆಯನ್ನು ಕೊಟ್ಟು, ನಮ್ಮ ಬನ್ನೂರು ಪುರಸಭೆಗೆ ಕೀರ್ತಿ ತರಬೇಕೆಂದು ಕೇಳಿಕೊಳ್ಳುತ್ತೆನೆ ಎಂದು ಭಾಗ್ಯಶ್ರಿ ಕೃಷ್ಣ ತಿಳಿಸಿದ್ದಾರೆ.