ಪಿರಿಯಾಪಟ್ಟಣ: ನಾಡೋಜ ಕವಿ ಡಾ.ಸಿದ್ದಲಿಂಗಯ್ಯ, ದೇವನೂರು ಮಹಾದೇವ ಹಾಗೂ ಬಿ.ಕೃಷ್ಣಪ್ಪ ದಲಿತ ಸಮಾಜದ ರತ್ನಗಳಾದ ಇವರು ಬಡವರ ನಗುವಿನ ಶಕ್ತಿಯಾಗಿದ್ದರು ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ವರದಯ್ಯ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಾಡೋಜ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟಿದವರೆಲ್ಲ ಚರಿತ್ರೆಯಾಗುವುದಿಲ್ಲ, ಕೆಲವರು ಸಾವಿನ ನಂತರ ಚರಿತ್ರೆಯಾದರೆ ಮತ್ತೆ ಕೆಲವರು ಬದುಕಿರುವಾಗಲೇ ಚರಿತ್ರೆ ಸೃಷ್ಟಿಸುತ್ತಾರೆ ಇದಕ್ಕೆ ಬಂಡಾಯ ಕವಿ ಸಿದ್ದಲಿಂಗಯ್ಯನವರೆ ಜ್ವಲಂತಸಾಕ್ಷಿ. ಎಳೆಯ ವಯಸ್ಸಿನಲ್ಲಿಯೇ ಕವಿತೆ ಬರೆವ ಅಭ್ಯಾಸ ಮೈಗೂಡಿಸಿಕೊಂಡಿದ್ದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಭಾಷಣಕಾರರಾಗಿದ್ದರು.
ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿ, 1970ರ ದಶಕದಲ್ಲಿ ಬಿ.ಬಸವಲಿಂಗಪ್ಪನವರ ಬೂಸಾ ಚಳವಳಿಯ ಮೂಲಕ ಹೋರಾಟಕ್ಕೆ ದುಮುಕಿ ಬಡತನವನ್ನೇ ಹೋರಾಟದ ಶಕ್ತಿಯನ್ನಾಗಿಸಿಕೊಂಡರು.
ದಲಿತ ಚಳವಳಿಯಲ್ಲಿ ಭಾಗವಹಿಸುತ್ತಲೇ 1975ರಲ್ಲಿ ಹೊಲೆಮಾದಿಗರ ಹಾಡು ಕವನಸಂಕಲನ ಪ್ರಕಟಿಸಿದರು. ಇವರು ಜೀವನದುದ್ದಕ್ಕೂ ಬರೆಯುವುದು ಮತ್ತು ಹೋರಾಟವನ್ನು ತಮ್ಮ ಬಾಳಿನ ಉಸಿರಾಗಿಸಿಕೊಂಡು ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದು, ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಾಹಿತ್ಯ ರಚನೆ ಮಾಡಿದ್ದು ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗುವ ಮೂಲಕ ಶೋಷಿತರ ಪ್ರಖರ ಧ್ವನಿಯಾಗಿ ಕ್ರಾಂತಿ ಪದಗಳ ಬೆಂಕಿ ಕವಿ ಎಂದು ಪ್ರಖ್ಯಾತಿ ಪಡೆದಿದ್ದರು ಎಂದರು.
ಉಪನ್ಯಾಸಕ ಪುಟ್ಟಮಾದಯ್ಯ ಮಾತನಾಡಿ, ಸಿದ್ದಲಿಂಗಯ್ಯ ನವರು ಶೋಷಿತ ಸಮಾಜದ ಎಲ್ಲರ ಧ್ವನಿಯಾಗಿ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದರು ಎಂದರು.
ಉಪನ್ಯಾಸಕ ಆಯಿತನಹಳ್ಳಿ ಗಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಕೊಡುಗಿ ನೀಡಿದ್ದಂತ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಕಳೆದುಕೊಂಡಿರುವುದು ಸಾಹಿತ್ಯಲೋಕದ ಕೊಂಡಿಯೊಂದು ಕಳಚಿದಂತಾಗಿದೆ ಎಂದರು.
ದಸಂಸ ತಾಲೂಕು ಸಂಚಾಲಕ ಪಿ.ಮಹದೇವ್, ಉಪನ್ಯಾಸಕ ಕುಮಾರ್, ಚನ್ನಕಾಲ್ ಕಾವಲ್ ಶೇಖರ್, ಮುಖಂಡರಾದ ಆರ್.ಡಿ.ಮಹದೇವ್, ಲಿಂಗಾಪುರ ಬಸಪ್ಪ, ಬಾಳೆಕಟ್ಟೆ ರಾಜಯ್ಯ, ಆರ್.ಹೊಸಳ್ಳಿ ಜಯಣ್ಣ, ವಾಜೀದ್ ಖಾನ್, ಭೀಮ್ ಆರ್ಮಿ ಗಿರೀಶ್, ತಿಮಕಾಪುರ ಹರೀಶ್, ರಾಜಶೇಖರ್, ಎ.ಪಿ.ಮಂಜು, ಪ್ರಕಾಶ್ ಮಾಕೋಡ್, ಡಿ.ಚನ್ನವೀರಯ್ಯ, ಸೋಮಶೇಖರ್, ಅಂಕನಹಳ್ಳಿ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.