Breaking NewsNEWSರಾಜಕೀಯ

ಹಾನಗಲ್ ಉಪ ಚುನಾವಣೆ: ಅಂತರ ಜಿಲ್ಲಾ ಅಧಿಕಾರಿಗಳ ಸಭೆ

ಗಡಿ ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿ- ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪಾರದರ್ಶಕವಾಗಿ ನಡೆಸುವ ಹಿನ್ನೆಲೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಗಡಿ ತಾಲೂಕುಗಳ ಚೆಕ್‍ಪೋಸ್ಟ್‍ಗಳಲ್ಲಿ ಕಂದಾಯ, ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹಾನಗಲ್ ತಾಲೂಕಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು, ಕಾರವಾರ ಜಿಲ್ಲೆಯ(ಉತ್ತರ ಕನ್ನಡ), ಶಿರಸಿ, ಮುಂಡಗೋಡ ತಾಲೂಕು.

ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರ, ಅಬಕಾರಿ ಹಾಗೂ ಪೊಲೀಸ್ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಹಾನಗಲ್ ಗಡಿ ತಾಲೂಕುಗಳಲ್ಲಿ ತೀವ್ರ ನಿಗಾವಹಿಸಬೇಕು. ಕಾನೂನು ಸುವ್ಯವಸ್ಥೆ ಹಾಗೂ ಚುನಾವಣಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಎಲ್ಲರ ಸಹಕಾರ ಅವಶ್ಯ ಎಂದರು.

ಹಾನಗಲ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಗಡಿ ಭಾಗ ಸೇರಿದಂತೆ 16 ಚೆಕ್‍ಪೋಸ್ಟ್‌ಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಅರಣ್ಯ, ಆರ್.ಟಿ.ಓ. ಚೆಕ್ ಪೋಸ್ಟ್‍ಗಳು ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಚೆಕ್‍ಪೋಸ್ಟ್‍ಗಳ ಮೇಲೆ ತೀವ್ರ ಕಣ್ಗಾವಲು ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚುನಾವಣೆಯ ಈ ವೇಳೆ ಹೊರ ಜಿಲ್ಲೆಗಳಿಂದ ಬರುವ ವಾಹನ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಬೇಕು. ಅಕ್ರಮ ಸಾಮಗ್ರಿಗಳು, ಹಣ, ಮದ್ಯ ಸೇರಿದಂತೆ ಶಿರಸಿ, ಮುಂಡಗೋಡ, ಸೊರಬ ಹಾಗೂ ಜಿಲ್ಲೆಯ ವಿವಿಧ ತಾಲೂಕಿನಿಂದ ಹಾನಗಲ್ ಕ್ಷೇತ್ರ ಪ್ರವೇಶಿಸುವವರ ಮೇಲೆ ತೀವ್ರ ನಿಗಾವಹಿಸಿ. ರಾತ್ರಿ ವೇಳೆಯಲ್ಲಿ ವಿವಿಧ ತಂಡಗಳನ್ನು ರಚಿಸಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲೆಯಾದ್ಯಂತ ರೌಡಿ, ಗೂಂಡಾ, ಸಮಾಜಘಾತುಕ ಶಕ್ತಿಗಳ ಮೇಲೆ ತೀವ್ರ ನಿಗಾವಹಿಸಬೇಕು. ಖಾಸಗಿ ಹೋಟೆಲ್, ರೆಸಾರ್ಟ್, ಲಾಡ್ಜ್, ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿದಂತೆ ವಿವಿಧೆಡೆ ಚುನಾವಣಾ ಉದ್ದೇಶದಿಂದ ವಾಸ್ತವ್ಯ ಹೂಡಿರುವವರ ಮೇಲೆ ತೀವ್ರ ನಿಗಾವಹಿಸಿ. ಮತದಾನಕ್ಕಿಂತ 72 ಗಂಟೆ ಮುಂಚಿತವಾಗಿ ಕ್ಷೇತ್ರದಿಂದ ಹೊರಹೋಗಬೇಕು.

ಈ ಬಗ್ಗೆ ನಿಗಾವಹಿಸಿ, ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ. ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ವ್ಯಕ್ತಿಗಳು ಹಾಗೂ ವಾಹನದ ಮೇಲೆ ನಿಗಾವಹಿಸಬೇಕು. ಚುನಾವಣಾ ನೀತಿ ಸಂಹಿತೆ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘನೆಯಾದರೆ ಕಡ್ಡಾಯವಾಗಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಮಾತನಾಡಿ, ಚುನಾವಣೆಗೆ ಬಳಸುವ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರ ಸಾಮಗ್ರಿಗಳನ್ನು ತಯಾರಿಸಲು ಎಂ.ಸಿ.ಎಂ.ಸಿ. ತಂಡದಿಂದ ಪೂರ್ವಾನುಮತಿ ಪಡೆಯಬೇಕು.

ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಿಸಿದ ಸಂಖ್ಯೆ, ಮುದ್ರಕರ ವಿಳಾಸ ಸೇರಿದಂತೆ ಪೂರ್ಣ ಮಾಹಿತಿ ಪ್ರಕಟಿಸಬೇಕು. ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಸಾಮಗ್ರಿ ಮುದ್ರಿಸಿದ್ದರೆ ಜಿಲ್ಲಾ ಮಟ್ಟದ ವೆಚ್ಚ ನಿರ್ವಹಣಾ ತಂಡಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಚುನಾವಣಾ ಸಂದರ್ಭದಲ್ಲಿ 10 ಲಕ್ಷ ರೂ.ಕ್ಕಿಂತ ಕಡಿಮೆ ಮೊತ್ತದ ಅಕ್ರಮ ಹಣವನ್ನು ವಶಪಡಿಸಿಕೊಂಡರೆ ಹಣ ಮುಟ್ಟುಗೋಲು ಸಮಿತಿಗೆ ಮಾಹಿತಿ ನೀಡಬೇಕು. 10 ಲಕ್ಷ ರೂ.ಕ್ಕಿಂತ ಹೆಚ್ಚು ಮೊತ್ತದ ಹಣ ವಶಪಡಿಸಿಕೊಂಡರೆ ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು. ಈ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಡಿಯೋ ಚಿತ್ರೀಕರಣ ಮಾಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮತದಾನಕ್ಕಿಂತ 72 ಗಂಟೆ ಮುಂಚಿತವಾಗಿ ಹೊರ ಜಿಲ್ಲೆಯಿಂದ ಬಂದಂತಹ ರಾಜಕೀಯ ಮುಖಂಡರು, ಮತದಾರರು ಅಲ್ಲದ ವ್ಯಕ್ತಿಗಳನ್ನು ಜಿಲ್ಲೆಯಿಂದ ಕಳುಹಿಸಬೇಕು. ಮತದಾನಕ್ಕಿಂತ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬ್ಯಾನರ್, ಬಂಟಿಂಗ್‍ಗಳ ಬಳಕೆ ಹಾಗೂ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ. ಮತದಾನಕ್ಕಿಂತ ಮೊದಲು 24 ಗಂಟೆ ಮಸ್ಟರಿಂಗ್ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಹಂಚುವಿಕೆ ಹಾಗೂ ಇತರೆ ಸಾಮಗ್ರಿಗಳ ವಿತರಣೆ ಕುರಿತು ತೀವ್ರ ನಿಗಾವಹಿಸುವಂತೆ ಸೂಚನೆ ನೀಡಿದರು.

ಚೆಕ್ ಪೋಸ್ಟ್‍ಗಳಲ್ಲಿ ಅಂತರ ಜಿಲ್ಲಾ, ಹೊರ ರಾಜ್ಯದ ಸಾಗಾಣಿಕೆ ವಾಹನಗಳ ಮೃಲೆ ತೀವ್ರ ನಿಗಾವಹಿಸಿ. ಸಾಮಗ್ರಿಗಳ ಸಾಗಾಣಿಕೆ ಜಿ.ಎಸ್.ಟಿ. ಬಿಲ್‍ಗಳನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಿ. ಅಕ್ರಮ ಸಾಗಾಟ ಎಂದು ಕಂಡುಬಂದರೆ ವಾಣಿಜ್ಯ ತೆರಿಗೆ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಮತದಾನಕ್ಕಿಂತ 72 ಗಂಟೆ ಮುಂಚಿತವಾಗಿ ವಿವಿಧ ಚೆಕ್ ಪೋಸ್ಟ್‌ನಲ್ಲಿ ಪೊಲೀಸ್, ಅಬಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೀವ್ರ ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಪರವಾನಿಗೆ ರಹಿತವಾಗಿ ಅಕ್ರಮವಾಗಿ ಮದ್ಯದಾಸ್ತಾನು ಮತ್ತು ತಯಾರಿಕೆ ಮೇಲೆ ತೀವ್ರ ನಿಗಾವಹಿಸಬೇಕು.

ಎಲ್ಲ ಸಗಟು ಮದ್ಯ ಮಳಿಗೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ದಿನವಹಿಸಿ ದಾಸ್ತಾನು ಪರಿಶೀಲನೆ ನಡೆಸಬೇಕು. ಮುಂಡಗೋಡ, ಶಿರಸಿ, ಸೊರಬ ತಾಲೂಕು ವ್ಯಾಪ್ತಿಗಳಲ್ಲಿ ವಿವಿಧ ತಂಡಗಳನ್ನ ರಚಿಸಿ ಚೆಕ್‍ಪೋಸ್ಟ್‍ಗಳಿಗೆ ನಿಯೋಜಿಸಿ ತೀವ್ರ ನಿಗಾವಹಿಸುವಂತೆ ಆಯಾ ತಾಲೂಕಾ ತಹಶೀಲ್ದಾರ, ಪೊಲೀಸ್ ಹಾಗೂ ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ, ಡಿ.ಎಫ್.ಒ ಬಾಲಕೃಷ್ಣ ಹಾಗೂ ಶಿರಸಿ, ಮುಂಡಗೋಡ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ತಹಸೀಲ್ದಾರಗಳು, ಕಂದಾಯ, ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ