ನಂಜನಗೂಡು: ಸುಮಾರು ಎಂಟು ಲಕ್ಷ ರೂ. ಮೌಲ್ಯದ ಒಡವೆಗಳನ್ನು ಹಿಂದಿರುಗಿಸೋ ಮೂಲಕ ನಿರ್ವಾಹಕ ಪ್ರಾಮಾಣಿಕತೆ ಮೆರೆದ ಘಟನೆ ನಂಜನಗೂಡು ನಡೆದಿದೆ.
ದಾವಣಗೆರೆಯ 7 ಜನ ಪ್ರಯಾಣಿಕರು ಮೈಸೂರಿನಿಂದ ನಂಜನಗೂಡಿಗೆ ಬರುವಾಗ ಬಸ್‌ನಲ್ಲಿ ಸುಮಾರು ಎಂಟು ಲಕ್ಷ ರೂ. ಮೌಲ್ಯದ ಒಡವೆಗಳನ್ನು ಬಿಟ್ಟು ಹೋಗಿದ್ದರು. ಆ ಒಡವೆಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಬಸ್ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ದಾವಣಗೆರೆಯ ಆ 7 ಜನ ಪ್ರಯಾಣಿಕರು ಮೈಸೂರಿನಿಂದ ನಂಜನಗೂಡಿಗೆ ಕಾರ್ಯಕ್ರಮವೊಂದರ ನಿಮಿತ್ತ ಬರುತ್ತಿದ್ದರು. ಈ ವೇಳೆ ನಂಜನಗೂಡು ಘಟಕದ ವಾಹನ ಸಂಖ್ಯೆ ಕೆಎ 10 ಎಫ್- 0157ಸಾರಿಗೆ ಬಸ್ಸಿನಲ್ಲಿ ಇಳಿಯುವಾಗ ಬ್ಯಾಗ್‌ಅನ್ನು ಬಸ್ಸಿನಲ್ಲಿಯೇ ಮರೆತು ಬಿಟ್ಟಿದ್ದರು.
ಈ ವೇಳೆ ನಿರ್ವಾಹಕ ಈರಯ್ಯ (ಬಿಲ್ಲೆ ಸಂಖ್ಯೆ1614) ಅವರು ಬಸ್ಸಿನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ್ದಾರೆ. ಆ ಬ್ಯಾಗನ್ನು ತೆಗೆದು ನೋಡಲಾಗಿ ಅದರಲ್ಲಿ ಚಿನ್ನದ ಒಡವೆಗಳು ಕಂಡುಬಂದಿದೆ. ಕೂಡಲೆ ಬ್ಯಾಗನ್ನು ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಬ್ಯಾಗನ್ನು ಬಿಟ್ಟು ಹೋದವರು ಹುಡುಕಾಟ ನಡೆಸಿದಾಗ ಕೊನೆಗೂ ಸಾರಿಗೆ ಅಧಿಕಾರಿಗಳ ಕೈಯಲ್ಲಿ ಇರೋದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ನಿರ್ವಾಹಕರ ಸಮಯಪ್ರಜ್ಞೆಯಿಂದ ಎಲ್ಲ ಒಡವೆಗಳನ್ನು ಘಟಕ ವ್ಯವಸ್ಥಾಪಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ.
ಬಳಿಕ ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪಟ್ಟಣ ಪೊಲೀಸ್ ಠಾಣೆಯ ಡಿವೈಎಸ್ಪಿ ಅವರ ಸಮ್ಮುಖದಲ್ಲಿ ನಿರ್ವಾಹಕ ಈರಯ್ಯ ಅವರನ್ನು ಸನ್ಮಾನಿಸಿ ಪ್ರಶಂಸೆ ವ್ಯಕ್ತ ಪಡಿಸಲಾಗಿದೆ.
ಈ ವೇಳೆ ಮಾತನಾಡಿದ ಡಿಎಂ ಅವರು ಚಾಲಕ ಮತ್ತು ನಿರ್ವಾಹಕರು ಸಂಸ್ಥೆಯನ್ನು ಪ್ರತಿನಿಧಿಸುವ ರಾಯಭಾರಿಗಳಿದ್ದಂತೆ. ಇವರ ಪ್ರಾಮಾಣಿಕತೆ ಇತರ ನೌಕರರಿಗೆ ಮಾದರಿಯಾಗಿದೆ ಮತ್ತು ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಶ್ಲಾಘಿಸಿದರು.
ಒಡವೆ ಕಳೆದುಕೊಂಡಿದ ಪ್ರಯಾಣಿಕರು ಮಾತನಾಡಿ, ಇಷ್ಟೊಂದು ಚಿನ್ನಾಭರಣ ಏಳೆಂಟು ವರ್ಷದ ದುಡಿಮೆಯ ಫಲ. ಬ್ಯಾಗ್, ಚಿನ್ನಾಭರಣ ಹೋಯಿತು ಎಂದು ಸಾಕಷ್ಟು ಸಂಕಟ ಪಟ್ಟಿದ್ದೆವು.
ಆದರೆ ಡಿಪೋಗೆ ಬಂದು ಕೇಳಿದಾಗ ನಿಮ್ಮ ಬ್ಯಾಗ್ ಎಲ್ಲಾ ವಸ್ತುಗಳನ್ನು ಕಂಡಕ್ಟರ್ ಅಧಿಕಾರಿಗಳಿಗೆ ಕೊಟ್ಟಿದ್ದಾರೆ ಎಂದಾಗ ಹೋದ ಜೀವ ವಾಪಸ್ಸು ಬಂದಂತಾಯಿತು. ಇಷ್ಟೊಂದು ಒಡವೆಗಳನ್ನು ಖರೀದಿಸಲು ಎಷ್ಟು ವರ್ಷ ಬೇಕಾಗುತ್ತಿತ್ತೋ ಗೊತ್ತಿಲ್ಲ ಎಂದು ಸಿಬ್ಬಂದಿಯ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಶಿವಯೋಗಿ ಸಿ. ಕಳಸದ ಅವರು ನಿರ್ವಾಹಕ ಈರಯ್ಯ ಅವರ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿದ್ದಾರೆ.