ಬೆಂಗಳೂರು: ಪೌರಾಡಳಿತ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಎಂಟಿಬಿ ನಾಗರಾಜ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಂದಾಯ ಸಚಿವ ಆರ್.ಅಶೋಕ್ ಕಾರ್ಯನಿರ್ವಹಿಸುತ್ತಿದ್ದು ಆ ಸ್ಥಾನಕ್ಕೆ ಎಂಟಿಬಿ ನಾಗರಾಜ್ ನೇಮಕೊಂಡಿದ್ದಾರೆ. ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಬುಧವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿದ್ದಕ್ಕೆ ಸಿಎಂ ಯಡಿಯೂರಪ್ಪ ಅವರ ಮೇಲೆ ಬೇಸರಗೊಂಡು ಜವಾಬ್ಧಾರಿಯನ್ನು ನಿರಾಕರಿಸಿದ್ದರು. ಆದರೆ ಇದೀಗ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ನಂತ ಧೀಡೀರ್ ಬೆಳವಣಿಗೆಯಲ್ಲಿ ಎಂಟಿಬಿ ನಾಗರಾಜ್ ನೇಮಕ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಇನ್ನು ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂಟಿಬಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಗಿತ್ತು. ನಂತರ ಸಚಿವ ಸ್ಥಾನ ನೀಡಲಾಗಿತ್ತು. ಈ ವೇಳೆ ನೀಡಿದ್ದ ಅಬಕಾರಿ ಖಾತೆಗೆ ಎಂಟಿಬಿ ವಿರೋಧ ವ್ಯಕ್ತಪಡಿದ್ದರು. ಬದಲಾಗಿ ವಸತಿ ಖಾತೆಗೆ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಸಕ್ಕರೆ ಹಾಗೂ ಪೌರಾಡಳಿತ ಖಾತೆ ನೀಡಲಾಯಿತು.
ಆದರೆ, ಇದರಿಂದ ಸಮಾಧಾನಗೊಳ್ಳದ ಎಂಟಿಬಿ ಸಿಎಂ ವಿರುದ್ದ ಮುನಿಸಿಕೊಂಡಿದ್ದರು. ಸಿಎಂ ನಿವಾಸದ ಕಡೆಗೂ ಹೆಚ್ಚಾಗಿ ಮುಖಮಾಡುತ್ತಿರಲಿಲ್ಲ. ಇದೀಗ ಕೊನೆಗೂ ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಉಸ್ತುವಾರಿ ಸ್ಥಾನ ಬೇಡಿಕೆ ಇಟ್ಟಿದ್ದ ಎಂಟಿಬಿ
ನನಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಸಿಎಂ ಮುಂದೆ ಎಂಟಿಬಿ ಇಟ್ಟಿದ್ದರು. ಹೊಸಕೋಟೆಯಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮಗಳಿಗೂ ಎಂಟಿಬಿಗೆ ಆಹ್ವಾನ ಸಿಗುತ್ತಿರಲಿಲ್ಲ. ಇದಕ್ಕೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಕಾರಣ ಎಂಬ ಆಕ್ರೋಶವೂ ಎಂಟಿಬಿಗೆ ಇತ್ತು. ಈ ನಿಟ್ಟಿನಲ್ಲಿ ಸಿಎಂ ಮನೆಗೆ ಹೋಗಿ ಉಸ್ತುವಾರಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.